ಬೆಂಗಳೂರು:ಚಾಮರಾಜಪೇಟೆ ಆಟದ ಮೈದಾನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಆದೇಶಿಸಿದ್ದು, ಕೋರ್ಟ್‌ನ ಆದೇಶವನ್ನು ಪಾಲನೆ ಮಾಡಲಾಗುವುದು. ನ್ಯಾಯಾಲಯದ ಆದೇಶದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು. ಸರ್ಕಾರದ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀನಿವಾಸ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ, ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಹಬ್ಬ ಆಚರಣೆಗೆ ಅನುಮತಿ ನೀಡಬಾರದು ಎಂದು ದಲಿತ ಸಂಘಟನೆ ಸೇರಿದಂತೆ ಎರಡು ಸಂಘಟನೆಗಳು ಸಲ್ಲಿಸಿರುವ ಮನವಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಇನ್ನು ಚಾಮರಾಜಪೇಟೆ ಮೈದಾನಕ್ಕೆ ಪೊಲೀಸ್ ಭದ್ರತೆ ಮುಂದುವರೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಆದೇಶ ಸ್ವಾಗತರ್ಹ:ಚಾಮರಾಜಪೇಟೆ ಈದ್ಗಾ ಮೈದಾನದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಪಶ್ಚಿಮ ವಲಯ ಆಯುಕ್ತರು ನೀಡಿದ ಆದೇಶ ಸರಿಯಿಲ್ಲ. ಈ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಹೈಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವುದಕ್ಕೆ ನೀಡಿರುವ ಆದೇಶ ಸ್ವಾಗತಾರ್ಹ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಮುಹಮ್ಮದ್ ಶಾಫಿ ಹೇಳಿದ್ದಾರೆ.
ಮೈದಾನದ ಹೊರ ಭಾಗದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ:ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶ ಮೂರ್ತಿ ಕೂರಿಸಲು ಅನುಮತಿ ನಿರಾಕರಿಸುವ ರೀತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ. ಮತ್ತೊಂದೆಡೆ ಸರ್ಕಾರದಿಂದಲೂ ಯಾವುದೇ ಧನಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಹೀಗಾಗಿ, ಮೈದಾನದಲ್ಲಿ ಗಣೇಶೊತ್ಸವ ಆಚರಣೆಗೆ ತೀರ್ಮಾನಿಸಿದ ಏಳೆಂಟು ಸಂಘಟನೆಗಳು ಸೇರಿ ಶುಕ್ರವಾರ ಸಭೆ ನಡೆಸಲಿದ್ದೇವೆ. ಹಬ್ಬದ ವೇಳೆ ಮೈದಾನದ ಹೊರ ಭಾಗದಲ್ಲಿಯಾದರೂ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ ಚಾಮರಾಜಪೇಟೆ ನಾಗರಿಕರ ಒಕ್ಕೂಟದ ರುಕ್ಮಾಂಗದ ಹೇಳಿದ್ದಾರೆ.
ಇದನ್ನೂ ಓದಿ :ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಯಥಾಸ್ಥಿತಿಗೆ ಹೈಕೋರ್ಟ್ ನಿರ್ದೇಶನ