ಕರ್ನಾಟಕ

karnataka

ETV Bharat / state

ಸಿಲಿಂಡರ್ ಖರೀದಿಗೆ ಧನಸಹಾಯ: ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ - Cylinder Purchase

ಲಾಕ್​​ಡೌನ್‌ ಜಾರಿಯಲ್ಲಿರುವುದರಿಂದ ಆದಾಯವಿಲ್ಲದ ಹಾಗೂ ಸಂಕಷ್ಟದಲ್ಲಿರುವ ರಾಜ್ಯದ ಬಡ ಕುಟುಂಬಗಳಿಗೆ ಎಲ್​​ಪಿಜಿ ಗ್ಯಾಸ್​​ ಸಿಲಿಂಡರ್ ಖರೀದಿಸಲು ಅನುಕೂಲವಾಗುವಂತೆ ಧನಸಹಾಯ ನೀಡುವ ಬಗ್ಗೆ ರಾಜ್ಯ ಸರ್ಕಾರ ಶೀಘ್ರ ನೀತಿ ನಿರ್ಣಯ ಕೈಗೊಳ್ಳುವಂತೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

High Court Direction to State Govt
ಹೈಕೋರ್ಟ್‌ ನಿರ್ದೇಶನ

By

Published : Apr 25, 2020, 8:18 PM IST

ಬೆಂಗಳೂರು: ರಾಜ್ಯದಲ್ಲಿ ಲಾಕ್​​ಡೌನ್‌ ಜಾರಿಯಲ್ಲಿರುವುದರಿಂದ ಆದಾಯವಿಲ್ಲದ ಜನರಿಗೆ ಎಲ್​​ಪಿಜಿ ಗ್ಯಾಸ್​​ ಸಿಲಿಂಡರ್ ಖರೀದಿಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಹಾಯಧನ ನೀಡುವ ಬಗ್ಗೆ ಶೀಘ್ರ ನಿರ್ಣಯ ಕೈಗೊಳ್ಳಲು ಹೈಕೋರ್ಟ್‌ ವಿಭಾಗೀಯ ಪೀಠವು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಎಲ್‌ಪಿಜಿ ಸಿಲಿಂಡರ್ ಕನೆಕ್ಷನ್ ಹೊಂದಿರುವ ಹಾಗೂ ಆದಾಯವಿಲ್ಲದೆ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಿಲಿಂಡರ್ ಖರೀದಿಸಲು ಸಹಾಯ ಧನ ನೀಡುವಂತೆ ನಿರ್ದೇಶಿಸಲು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಕೀಲರು ರಾಜ್ಯದಲ್ಲಿರುವ ಕೆಳ ಮಧ್ಯಮ ವರ್ಗದವರ ಕುರಿತು ಪೀಠಕ್ಕೆ ವಿವರಣೆ ನೀಡಿ, ಲಾಕ್​​ಡೌನ್ ಹಿನ್ನೆಲೆಯಲ್ಲಿ ಬಡವರು ಸದ್ಯ ಆದಾಯವಿಲ್ಲದೆ ಎಲ್‌ಪಿಜಿ ಸಿಲಿಂಡರ್ ಖರೀದಿಸಲು ಸಾಧ್ಯವಾಗುತ್ತಿಲ್ಲ. ಅಂತಹ ಕುಟುಂಬಗಳಿಗೆ ಆಹಾರ ಕಿಟ್ ಹಾಗೂ ಪಡಿತರ ಕೊಟ್ಟರೂ ಅಡುಗೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಅವರಿಗೆ ಸರ್ಕಾರ ಉಚಿತವಾಗಿ ಸಿಲಿಂಡರ್ ವಿತರಿಸಬೇಕು ಎಂದು ಕೋರಿದರು.

ಇದಕ್ಕೆ ಸರ್ಕಾರಿ ವಕೀಲರು ಉತ್ತರಿಸಿ, ರಾಜ್ಯದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ 1.60 ಕೋಟಿ ಕುಟುಂಬಗಳು ಎಲ್‌ಪಿಜಿ ಸಂಪರ್ಕ ಹೊಂದಿವೆ. ಮೇ ಆರಂಭದಿಂದ ಒಂದು ಲಕ್ಷ ಕುಟುಂಬಗಳಿಗೆ ತಲಾ ಒಂದು ಸಿಲಿಂಡರ್ ಅನ್ನು ಉಚಿತವಾಗಿ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಸರಬರಾಜು ಮಾಡಲಾಗುತ್ತದೆ. ಆದರೆ, ಎಲ್‌ಪಿಜಿ ಸಂಪರ್ಕ ಹೊಂದಿದರೂ ಸಿಲಿಂಡರ್‌ಗೆ ಹಣ ಪಾವತಿಸಲಾಗದ ಸ್ಥಿತಿಯಲ್ಲಿ ಇರುವವರಿಗೆ ಉಚಿತವಾಗಿ ಸಿಲಿಂಡರ್ ಪೂರೈಸಲು ಕಷ್ಟವಾಗುತ್ತದೆ ಎಂದು ತಿಳಿಸಿದರು.

ಸರ್ಕಾರಿ ವಕೀಲರ ಹೇಳಿಕೆಗೆ ಸಮ್ಮತಿಸದ ಪೀಠ, ಪ್ರಧಾನಮಂತ್ರಿ ಉಜ್ವಲ ಹಾಗೂ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಗಳಿಗೆ ಒಳಪಡದ ಬಡ ಜನ, ಎಲ್‌ಪಿಜಿ ಸಂಪರ್ಕ ಹೊಂದಿದ್ದರೂ ಸದ್ಯ ಆದಾಯವಿಲ್ಲದ ಕಾರಣ ಸಿಲಿಂಡರ್ ಖರೀದಿಸಲು ಆಗುವುದಿಲ್ಲ. ಅಂತಹವರಿಗೆ ಒಂದು ಬಾರಿಯ ಕ್ರಮದಂತೆ ಎಲ್‌ಪಿಜಿ ಸಿಲಿಂಡರ್ ಖರೀದಿಸಲು ಸಹಾಯಧನ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೀಘ್ರ ನೀತಿ ನಿರ್ಣಯ ಕೈಗೊಳ್ಳಬೇಕು. ಈ ಕುರಿತು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿತು.

ABOUT THE AUTHOR

...view details