ಬೆಂಗಳೂರು: ಓರ್ವ ವ್ಯಕ್ತಿಯನ್ನು ನೋಯಿಸುವ ಯಾವುದೇ ಉದ್ದೇಶವಿಲ್ಲದೇ ಮಾಡುವ ಮನನೋಯಿಸುವ ವರ್ತನೆ ಅಥವಾ ದ್ವಂದ್ವಾರ್ಥದ(ಪನ್-) ಮಾತುಗಳನ್ನು ಕ್ರೌರ್ಯ ಎಂದು ಪರಿಗಣಿಸಲಾಗದು ಎಂದು ಹೈಕೋರ್ಟ್ ನಿಂದನೆ ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ವಜಾಗೊಳಿಸುವ ವೇಳೆ ಅಭಿಪ್ರಾಯಪಟ್ಟಿದೆ.
ಲಾಸ್ ಏಂಜಲೀಸ್ ಮೂಲದ ದಂತ ವೈದ್ಯ ಹಾಗೂ ಆತನ ಪೋಷಕರ ವಿರುದ್ಧ ಮಹಿಳೆಯೊಬ್ಬರು ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಗೆ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3, 4 ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406 ಹಾಗೂ 325 ಅಡಿ 2017ರಲ್ಲಿ ದೂರು ಸಲ್ಲಿಸಿದ್ದರು.
ಈ ದೂರು ರದ್ದು ಕೋರಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ, ಜಿ. ನರೇಂದರ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿ, ಪ್ರಕರಣವನ್ನು ರದ್ದುಪಡಿಸಿದೆ. ದಂತ ವೈದ್ಯನಾಗಿರುವ ಪತಿ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಎಂಡಿಎಸ್ ಓದುವ ವೇಳೆ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಪರಿಚಯವಾಗಿತ್ತು. ನಂತರ ಪರಸ್ಪರ ಪ್ರೀತಿಸಿ 2012ರಲ್ಲಿ ವಿವಾಹವಾಗಿದ್ದ ದಂಪತಿ ನಡುವೆ ಅಸಮಾಧಾನ ಉಂಟಾಗಿತ್ತು.