ಬೆಂಗಳೂರು: ಮಳೆ ಬಂದ್ರೆ ನಗರದ ತಗ್ಗು ಪ್ರದೇಶದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿಯನ್ನು ಹಲವು ವರ್ಷಗಳಿಂದ ಅನುಭವಿಸುತ್ತಲೇ ಬಂದಿದ್ದೇವೆ. ರಾಜಾಕಾಲುವೆಗಳು ತ್ಯಾಜ್ಯದಿಂದ ತುಂಬುತ್ತಿದ್ದ ನೀರು, ಸರಾಗವಾಗಿ ಹರಿಯದೆ ತಗ್ಗು ಪ್ರದೇಶಕ್ಕೆ ನುಗ್ಗುತ್ತಿರುವುದಕ್ಕೆ ಇಲ್ಲಿನ ಜನ ಕಂಗಾಲಾಗಿದ್ದಾರೆ.
ಈಗಾಗಲೇ ಮಳೆಗಾಲ ಶುರುವಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗಿದ್ದರೂ ಆಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡೇ ಇಲ್ಲವಂತೆ. ರಾಜಕಾಲುವೆಗಳಲ್ಲಿ ಆಳೆತ್ತರದ ಗಿಡಗಳು ಬೆಳೆದಿರುವುದು ಒಂದೆಡೆಯಾದ್ರೆ, ಯಥೇಚ್ಛವಾಗಿ ಹೂಳು ಸಹ ತುಂಬಿಕೊಂಡಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ರಾಜಾಕಾಲುವೆಗಳಲ್ಲಿ ಆಳೆತ್ತರದ ಗಿಡ, ಹೂಳು ನಗರದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ ಕೆ ಆರ್ ಪುರಂನಲ್ಲಿ ಇಂತಹದ್ದೊಂದು ಸಮಸ್ಯೆ ಎದುರಾಗಿದೆ. ಸಾರ್ವಜನಿಕರ ಗೋಳನ್ನ ಕೇಳುವವರೇ ಇಲ್ಲದಂತಾಗಿದೆ. ಕೆ ಆರ್ ಪುರಂ ವಾರ್ಡ್ನಲ್ಲಿ ಬರುವ ನೇತ್ರಾವತಿ ಬಡಾವಣೆ, ವೆಂಕಟೇಶ್ವರ ಟೆಂಟ್ ರಸ್ತೆ ಹಾಗೂ ರಾಜೀವ್ ಗಾಂಧಿ ಕೊಳಗೇರಿ ಹಾಗೂ ಬಸವನಪುರ ವಾರ್ಡ್ ಗಾಯತ್ರಿ ಬಡಾವಣೆ, ಮಂಜುನಾಥ ಬಡಾವಣೆಗಳಲ್ಲಿ ಹಾದು ಹೋಗಿರುವ ರಾಜಕಾಲುವೆಯಲ್ಲಿ ಜಂಬು ನಾರಿನಂತಹ ಗಿಡಗಳು ಆಳೆತ್ತರಕ್ಕೆ ಬೆಳೆದಿವೆ.
ಮಳೆಗಾಲ ಆರಂಭಕ್ಕೂ ಮುನ್ನ ನೀರುಗಾಲುವೆಗಳು, ರಾಜಾಕಾಲುವೆಗಳನ್ನು ಶುಚಿಗೊಳಿಸಬೇಕು ಎನ್ನುವ ನಿಯಮವಿದ್ದರೂ ಕೂಡಾ ಇದು ಪಾಲನೆಯಾಗುತ್ತಿಲ್ಲ. ರಾಜಾಕಾಲವೆಗಳು ಒತ್ತುವರಿಯಾಗಿದ್ದರೂ ಕೂಡಾ ಯಾರ ಕಣ್ಣಿಗೂ ಬಿದ್ದಿಲ್ಲ. ಕೆಲವು ಕಡೆ 50 ಅಡಿ ಇರುವ ಕಾಲುವೆ ಮತ್ತೊಂದು ಕಡೆ 3 ಅಡಿ ಕೂಡಾ ಇಲ್ಲ. ರಾಜಾಕಾಲುವೆಗಳ ಒತ್ತುವರಿ ಇಂದಾಗಿ ಮಳೆ ಬಂದಾಗ ಹೆಚ್ಚಿನ ಅನಾಹುತಗಳಾಗುತ್ತಿವೆ.