ದೇಸಿ ಕೋರ್ಸ್ ವ್ಯವಸ್ಥಾಪಕ ಪುರುಷೋತ್ತಮ್ ಬೆಂಗಳೂರು: ಕೃಷಿ ವಿಸ್ತರಣಾ ಸೇವೆಯಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಒಂದು ವರ್ಷದ ಡಿಪ್ಲೋಮಾ ಕೋರ್ಸ್(ದೇಸಿ) ಆರಂಭಿಸಿ ಎರಡು ದಶಕ ಕಳೆದಿದ್ದು, ಹೈದರಾಬಾದ್ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ ನೀಡುವ ಈ ಕೋರ್ಸ್ನ ಪ್ರಮಾಣ ಪತ್ರವನ್ನು ಕೃಷಿ ಪರಿಕರ ಮಾರಾಟಗಾರರು ಹೊಂದಿರುವುದು ಕಡ್ಡಾಯವಾಗಿದೆ. ಈ ಕೋರ್ಸ್ ನಿಂದ ಏನು ಉಪಯೋಗ, ಅರ್ಜಿ ಸಲ್ಲಿಸುವುದು ಹೇಗೆ?, ತರಬೇತಿ ಹೇಗೆ ನಡೆಯಲಿದೆ ಎಂಬ ಮಾಹಿತಿ ಇಲ್ಲಿದೆ.
ದೇಸಿ ಡಿಪ್ಲೋಮಾ ಕಾರ್ಯಕ್ರಮವು ಕೃಷಿ ಪರಿಕರ ವಿತರಕರಿಗೆ ಒಂದು ವರ್ಷದ ಅವಧಿಯ ಡಿಪ್ಲೋಮಾ ಕೋರ್ಸ್ ಆಗಿದ್ದು, ಮುಖ್ಯವಾಗಿ ಪರಿಕರ ವಿತರಕರ ಕೃಷಿ ಜ್ಞಾನವನ್ನು ನವೀಕರಿಸುವ ಮತ್ತು ಕೃಷಿ ತಾಂತ್ರಿಕತೆಗಳನ್ನು ವರ್ಗಾಯಿಸುವ ಕಾರ್ಯದಲ್ಲಿ ಪರಿಕರ ವಿತರಕರನ್ನು ಪೂರಕ ವಿಸ್ತರಣಾ ಕಾರ್ಯಕರ್ತರಾಗಿ ಬಳಸಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಕೇಂದ್ರ ಸರ್ಕಾರ ಈ ಕಾರ್ಯಕ್ರಮದ ಒಟ್ಟಾರೆ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದ್ದು, ಹೈದರಾಬಾದ್‍ನಲ್ಲಿರುವ ನಿರ್ವಹಣಾ ಸಂಸ್ಥೆಗೆ ಆಯಾ ರಾಜ್ಯಗಳ ಕೇಂದ್ರಗಳ ಮುಖಾಂತರ ದೇಸಿ ಕಾರ್ಯಕ್ರಮ ಅನುಷ್ಠಾನ ಮಾಡುವ ಅಧಿಕಾರ ನೀಡಿದೆ. ಕೃಷಿ ಪರಿಕರ ವಿತರಕರನ್ನು ಪೂರಕ ವಿಸ್ತರಣಾ ಕಾರ್ಯಕರ್ತರನ್ನಾಗಿ ಸಿದ್ದಪಡಿಸಿ ರೈತರಿಗೆ ಉತ್ತಮ ಸೇವೆ ನೀಡವ ಮತ್ತು ಜೊತೆಗೆ ರಾಷ್ಟ್ರೀಯ ಕೃಷಿ ವಿಸ್ತರಣೆಯನ್ನು ಬಲಪಡಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ.
ಉದ್ದೇಶಗಳೇನು?:ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳುವುದು. ಪರಿಕರ ಮಾರಾಟಗಾರರ ಕೃಷಿ ಮಾಹಿತಿ ವಿಸ್ತರಣೆ ಸಾಮರ್ಥ್ಯವನ್ನು ಮತ್ತು ನಿರ್ವಹಣೆಯನ್ನು ಉನ್ನತೀಕರಿಸುವುದು. ಕೃಷಿಗೆ ಸಂಬಂಧಿಸಿದಂತೆ ಕಾನೂನುಗಳ ಬಗ್ಗೆ ಜ್ಞಾನವನ್ನು ಒದಗಿಸುವುದು.
ಗ್ರಾಮಿಣ ಮಟ್ಟದಲ್ಲಿ ಕೃಷಿಕರಿಗೆ ಒಂದೇ ಸೂರಿನಡಿ ಮಾಹಿತಿ ದೊರೆಯುವಂತೆ ಮಾಡುವುದು.
ಕೋರ್ಸ್ಗೆ ಯಾರು ಅರ್ಹರು?:ಈ ಕೋರ್ಸ್ಗೆ ಪ್ರವೇಶ ಬಯಸುವವರು 18 ವರ್ಷ ತುಂಬುವುದು ಕಡ್ಡಾಯವಾಗಿದ್ದು, ಗರಿಷ್ಠ ವಯೋಮಿತಿ ನಿಗದಿಪಡಿಸಿಲ್ಲ. ಕನಿಷ್ಠ ಎಸ್ಎಸ್ಎಲ್ಸಿ ವಿದ್ಯಾರ್ಹತೆ ಕಡ್ಡಾಯಗೊಳಿಸಲಾಗಿದೆ. ಒಟ್ಟು 48 ವಾರಗಳ ಕಾಲ ಡಿಪ್ಲೋಮಾ ಕೋರ್ಸ್ ನಡೆಯಲಿದ್ದು, ವಾರಕ್ಕೆ ಒಂದು ದಿನದಂತೆ 40 ತರಗತಿಗಳು ಮತ್ತು 8 ಕ್ಷೇತ್ರ ಭೇಟಿ ಇರಲಿದೆ. ಬಹುತೇಕ ಪ್ರತಿ ಭಾನುವಾರ ಅಥವಾ ರಜಾ ದಿನದಂದು ತರಗತಿ ನಡೆಯಲಿದೆ. ಬೆಳಗಿನ ತರಗತಿ ಮತ್ತು ಮಧ್ಯಾಹ್ನದ ತರಗತಿಯಂತೆ ದಿನಕ್ಕೆ 2 ತರಗತಿ ನಡೆಯಲಿವೆ. ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ತರಗತಿ ನಡೆಯಲಿದೆ.
ತರಗತಿಗಳಿಗೆ ಕನಿಷ್ಠ ಶೇ.80ರಷ್ಟು ಹಾಜರಾತಿ ಕಡ್ಡಾಯವಾಗಿದೆ. ಅದರಂತೆ 80 ತರಗತಿಗಳಲ್ಲಿ 64 ತರಗತಿ ಹಾಗೂ ಕ್ಷೇತ್ರ ಭೇಟಿಯಲ್ಲಿ ಶೇ.75ರಷ್ಟು ಕನಿಷ್ಠ ಹಾಜರಾತಿ ಕಡ್ಡಾಯವಾಗಿದೆ. ಅದರಂತೆ 6 ಕ್ಷೇತ್ರ ಭೇಟಿ ಮಾಡಲೇಬೇಕು. ಆಯಾ ಜಿಲ್ಲೆಯ ಕೃಷಿ ಇಲಾಖೆಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು, ಪ್ರತಿ ತಂಡದಲ್ಲಿ 40 ಅಭ್ಯರ್ಥಿಗಳಿರುವ ಪಟ್ಟಿಯನ್ನು ಶುಲ್ಕದೊಂದಿಗೆ ದಕ್ಷಿಣ ನಿರ್ದೇಶಕರಿಗೆ ಕಳುಹಿಸಲಾಗುತ್ತದೆ. ಅರ್ಹ ಅಭ್ಯರ್ಥಿಗಳಿಗೆ ಹೈದರಾಬಾದ್ ನಿರ್ವಹಣಾ ಸಂಸ್ಥೆ ಪ್ರವೇಶಾತಿಗೆ ಅನುಮತಿ ನೀಡಲಿದೆ. ಅಭ್ಯರ್ಥಿಯು ಕೋರ್ಸ್ಗೆ 20 ಸಾವಿರ ಶುಲ್ಕವನ್ನು ಪಾವತಿಸಬೇಕಿದೆ. ಈ ಶುಲ್ಕದಲ್ಲಿ ತರಗತಿ ನಡೆಯುವ ದಿನದಂದು ಮಧ್ಯಾಹ್ನದ ಭೋಜನವನ್ನು ಒಳಗೊಂಡಿರಲಿದೆ.
ಬೋಧನಾ ವಿಷಯವೇನು?:ಕೃಷಿ-ಪರಿಸರ ಪರಿಸ್ಥಿತಿಗಳು, ಮಣ್ಣಿನ ಆರೋಗ್ಯ ನಿರ್ವಹಣೆ, ಮಳೆಯಾಶ್ರಿತ ಕೃಷಿ, ಬೀಜ ಮತ್ತು ಬೀಜ ಉತ್ಪಾದನೆ, ನೀರಾವರಿ ತಂತ್ರಗಳು ಮತ್ತು ನೀರಿನ ನಿರ್ವಹಣೆ, ಕಳೆ ನಿರ್ವಹಣೆ, ಕೃಷಿ ಯಂತ್ರೋಪಕರಣಗಳು ಮತ್ತು ಉಪಕರಣಗಳು, ಕೀಟ ಮತ್ತು ರೋಗ ನಿಯಂತ್ರಣ, ಸ್ಥಳೀಯ ಬೆಳೆಗಳ ಬೆಳೆ ಉತ್ಪಾದನಾ ತಂತ್ರಜ್ಞಾನಗಳು. ಕೃಷಿ ಒಳಹರಿವುಗಳಿಗೆ ಸಂಬಂಧಿಸಿದ ಕಾಯಿದೆಗಳು, ನಿಯಮಗಳು ಮತ್ತು ನಿಬಂಧನೆಗಳು, ಕೃಷಿಗೆ ಸಂಬಂಧಿಸಿದ ಯೋಜನೆಗಳು, ವಿಸ್ತರಣಾ ಶಿಕ್ಷಣ ವಿಧಾನಗಳು ಮತ್ತು ಕ್ಷೇತ್ರ ಭೇಟಿಗಳು ಇರಲಿವೆ.
ಪ್ರತಿಯೊಂದು ದೇಸಿ ತಂಡಕ್ಕೆ ಹೈದರಾಬಾದ್ನ ನಿರ್ವಹಣಾ ಸಂಸ್ಥೆ ತರಬೇತಿ ನೀಡಿ ಕಾರ್ಯಕ್ರಮದ ಸಂಖ್ಯೆಯನ್ನು ನಿಡಲಿದೆ. ಕೃಷಿ ಪರಿಕರ ಮಾರಾಟಕ್ಕೆ ಪರವಾನಗಿ ಹೊಂದಿರುವ ಅಭ್ಯರ್ಥಿಗಳಿಗೆ ಕೇಂದ್ರ ಯೋಜನಾ ವಲಯ ಪ್ರಯೋಜನೆಯಡಿ ಪ್ರತಿ ಅಭ್ಯರ್ಥಿಗೆ 10 ಸಾವಿರಗಳಂತೆ ನೋಡಲ್ ತರಬೇತಿ ಕೇಂದ್ರಗಳಿಗೆ ಹಣಕಾಸಿನ ನೆರವು ಒದಗಿಸಲಿದೆ. ದೇಸಿ ಕೋರ್ಸ್ ನಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಲಿದೆ. ಒಟ್ಟಾರೆಯಾಗಿ ದೇಸಿ ಕಾರ್ಯಕ್ರಮದ ಮೇಲ್ವಿಚಾರಣೆ ನೋಡಿಕೊಳ್ಳಲಿದೆ.
ದೇಸಿ ಕೋರ್ಸ್ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ದೇಸಿ ಕೋರ್ಸ್ ವ್ಯವಸ್ಥಾಪಕ ಪುರುಷೋತ್ತಮ್, "ದೇಸಿ ಕೋರ್ಸ್ ಮಾಡಿದ ಅಭ್ಯರ್ಥಿಗಳಿಗೆ ರೈತರೊಂದಿಗೆ ಯಾವ ರೀತಿ ಸಂವಹನ ನಡೆಸಬೇಕು, ರೈತರಿಗೆ ಮಾಹಿತಿ ಮತ್ತು ತಿಳುವಳಿಕೆ ನೀಡಬೇಕು, ವ್ಯವಸಾಯಕ್ಕೆ ಪೂರಕ ಮಾಹಿತಿ ನೀಡಬೇಕು ಎನ್ನುವುದನ್ನು ಕಲಿಸಿಕೊಡಲಾಗುತ್ತದೆ. ಇದರಿಂದಾಗಿ ಕೋರ್ಸ್ ಮಾಡಿದ ಅಭ್ಯರ್ಥಿಗಳು ರೈತರಿಗೆ ಹತ್ತಿರವಾಗಲಿದ್ದಾರೆ. ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಕೆಗೆ ಸಹಕಾರಿಯಾಗಲಿದೆ. ಇದರಿಂದ ರೈತರಿಗೂ ಲಾಭವಾಗಲಿದೆ. ಕೋರ್ಸ್ ಮಾಡಿದವರಿಗೂ ಕೃಷಿ ಪರಿಕರ ಮಾರಾಟಕ್ಕೆ ಹೆಚ್ಚಿನ ಅವಕಾಶ ಸಿಗಲಿದೆ" ಎಂದರು.
ಇದನ್ನೂ ಓದಿ:ಕೃಷಿ ಕ್ಷೇತ್ರದ ಬೆಳವಣಿಗೆಗೆ ಸರ್ಕಾರ ಸಹಕಾರ, ಅನುದಾನ ನೀಡಲಿದೆ: ಸಿಎಂ ಸಿದ್ದರಾಮಯ್ಯ