ಯಲಹಂಕ (ಬೆಂಗಳೂರು): ಕೊರೊನಾ ಎರಡನೇ ಅಲೆ ಆರಂಭವಾದಾಗಿನಿಂದಲೂ ರಾಜ್ಯ ಸರ್ಕಾರಗಳಿಗೆ ಕೇಂದ್ರವು ಎಲ್ಲ ರೀತಿಯಿಂದಲೂ ಬೆಂಬಲ ನೀಡಿದ್ದು, ಇದು ಮುಂದುವರಿಯಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ರಾಜ್ಯ ಸರ್ಕಾರ, ಬೋಯಿಂಗ್ ಇಂಡಿಯಾ, ಡಾಕ್ಟರ್ಸ್ ಫಾರ್ ಯು, ಸೆಲ್ಕೋ ಫೌಂಡೇಷನ್ ಮತ್ತು ಕೆಪಿಸಿಎಲ್ ಸಂಸ್ಥೆಗಳು ಜಂಟಿಯಾಗಿ ಯಲಹಂಕದಲ್ಲಿ ನಿರ್ಮಿಸಿರುವ ಆಮ್ಲಜನಕ ವ್ಯವಸ್ಥೆ ಹೊಂದಿರುವ ಸುಸಜ್ಜಿತ 100-ಬೆಡ್ ಕೋವಿಡ್ ಕೇರ್ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸದಾನಂದ ಗೌಡರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು ಕೋವಿಡ್ 2ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾದಾಗ ಆಮ್ಲಜನಕ, ಹಾಸಿಗೆಗಳು, ಕೆಲವೊಂದು ಔಷಧಗಳ ಕೊರತೆ ಕಾಣಿಸಿಕೊಂಡಿದ್ದು ನಿಜ. ಆದರೆ, ಕೇಂದ್ರ ಸರ್ಕಾರವು ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡಿತು. ಮೆಡಿಕಲ್ ಮತ್ತು ಆಮ್ಲಜನಕದ ಉತ್ಪಾದನೆಯನ್ನು 10 ಪಟ್ಟು ಹೆಚ್ಚಿಸಲಾಯಿತು. ಆಮ್ಲಜನಕ ಟ್ಯಾಂಕರ್ಗಳನ್ನು ಹೊತ್ತು ಸುಮಾರು 443 ಆಕ್ಸಿಜನ್ ಎಕ್ಸಪ್ರೆಸ್ಗಳು ದೇಶದ ತುಂಬಾ ಮಿಂಚಿನ ವೇಗದಲ್ಲಿ ಸಂಚರಿಸಿದವು. ಹಾಗೆಯೇ ವಾಯುದಳದ ಯುದ್ಧ ವಿಮಾನಗಳು ಸಹ ಆಮ್ಲಜನಕ ಹಾಗೂ ಔಷಧಗಳನ್ನು ಸಾಗಿಸಿದವು. ದೇಶದ ಮೂಲೆ ಮೂಲೆಗಳಲ್ಲಿ 1,500 ಆಮ್ಲಜನಕ ಘಟಕಗಳನ್ನು ಸ್ಥಾಪಿಸಲಾಯಿತು. ರೆಮ್ಡೆಸಿವಿರ್ನಂತಹ ಔಷಧಗಳ ಉತ್ಪಾದನೆಯನ್ನು ಮಾಸಿಕ 27 ಲಕ್ಷ ವಯಲ್ಸ್ನಿಂದ 1.19 ಕೋಟಿ ವಯಲ್ಸ್ಗೆ ಏರಿಸಲಾಯಿತು. ಈಗ ಆಮ್ಲಜನಕ ಅಥವಾ ಔಷಧಗಳ ಕೊರತೆ ಇಲ್ಲ. ಇದರಿಂದ ಎರಡನೇ ಅಲೆ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಅಷ್ಟೇ ಅಲ್ಲ, ಸಂಭವನೀಯ ಮೂರನೇ ಅಲೆಯನ್ನು ಎದುರಿಸಲು ಕೂಡ ದೇಶವು ಸಜ್ಜುಗೊಂಡಿದೆ ಎಂದರು.
ಇದನ್ನೂ ಓದಿ: Karnataka Unlock 2.0: ಬಸ್ ಸಂಚಾರ ಸೇರಿ ಯಾವೆಲ್ಲಾ ಸೇವೆ ಲಭ್ಯ?