ಬೆಂಗಳೂರು: ಸ್ಮಶಾನದಲ್ಲಿ ಕೆಲಸ ಮಾಡುತ್ತಿರುವವರ ಬದುಕಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಇಂದು ಅವರ ಜೊತೆ ಸಭೆ ನಡೆಸಿದ್ದೇನೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಅವರ ಬದುಕಿಗೆ ಭದ್ರತೆ ಕೊಡಬೇಕು, ಅವರ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು, ಹಾಗಾಗಿ ಇಂದು ಸ್ಮಶಾನ ಕಾಯುವವರ ಸಭೆಯನ್ನ ಕರೆದಿದ್ದೇನೆ. 840 ಜನರನ್ನ ಸ್ಮಶಾನ ಕಾವಲುಗಾರರು ಎಂದು ಗುರ್ತಿಸಲಾಗಿದೆ. 5 ಸಾವಿರ ಕಾರ್ಮಿಕರು ಸ್ಮಶಾನ ಕಾಯುತ್ತಿದ್ದಾರೆ. ಅವರ ಬದುಕಿಗೆ ಯಾವುದೇ ಭದ್ರತೆ ಇಲ್ಲ. ಇವೆಲ್ಲ ವಿಚಾರ ಸಭೆಯಲ್ಲಿ ಚರ್ಚೆಯಾಗಿದೆ ಎಂದರು.
ಅವರು ನೌಕರಿ ಕಾಯಂ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ. ವಸತಿಗೆ ಬೇಡಿಕೆ ಇಟ್ಟಿದ್ದಾರೆ. ಇದರ ಬಗ್ಗೆ ರಾಜೀವ್ ವಸತಿ ಇಲಾಖೆಗೆ ಜೊತೆ ಚರ್ಚಿಸುತ್ತೇನೆ. ಮಕ್ಕಳ ಶಿಕ್ಷಣಕ್ಕೆ 2% ಮೀಸಲಿಟ್ಟಿದ್ದೇವೆ. ಪ್ರತಿಷ್ಠಿತ ಶಾಲೆಗಳಲ್ಲಿ ಸರ್ಕಾರವೇ ಶುಲ್ಕ ಪಾವತಿಸಲಿದೆ. ದೇವದಾಸಿಯರು, ಮ್ಯಾನ್ ಹೋಲ್ಸ್ ಕಾರ್ಮಿಕರು ಮಕ್ಕಳು, ಸ್ಮಶಾನ ನೌಕರರ ಮಕ್ಕಳಿಗೆ ಯೋಜನೆ ರೂಪಿಸ್ತೇವೆ ಎಂದು ತಿಳಿಸಿದರು.
ಒಳ ಮೀಸಲಾತಿ ನೀಡುವ ವಿಚಾರ ಮಾತನಾಡಿ, ಸದಾಶಿವ ಆಯೋಗದ ವರದಿ ಬಗ್ಗೆ ಚರ್ಚೆಯಾಗಿದೆ. ಮೊನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆಯಾಗಿದೆ. ಒಳ ಮೀಸಲಾತಿ ಕಲ್ಪಿಸಿ ಎಂಬ ಬೇಡಿಕೆಗಳಿವೆ. ಸದಾಶಿವ ಆಯೋಗದ ವರದಿ ಚರ್ಚೆಗೆ ಬಂದಾಗ ಈ ಒಳ ಮೀಸಲಾತಿ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ತೇವೆ. ಸ್ಪರ್ಷ, ಅಸ್ಪೃಷ್ಯ ಜಾತಿಗಳ ಬಗ್ಗೆ ಇಲ್ಲಿ ಚರ್ಚೆಯಿಲ್ಲ. ಒಳಮೀಸಲಾತಿ ಬಗ್ಗೆಯಷ್ಟೇ ಚರ್ಚೆಯಾಗಿದೆ ಎಂದರು.
ಶಾಲೆಗಳಲ್ಲಿ ಯೋಗ ತರಬೇತಿಗೆ ಆರ್ಎಸ್ಎಸ್ಗೆ ಅನುಮತಿ ವಿಚಾರ ಮಾತನಾಡಿ, ಕೊಡಬಾರದು ಎಂದು ಎಲ್ಲೂ ಹೇಳಿಲ್ಲ. ರಾಷ್ಟ್ರಪ್ರೇಮ ಕಲಿಸ್ತೇವೆ ಎಂದು ಅರ್ಜಿ ಹಾಕಿದ್ದರು. ಅರ್ಜಿ ಪರಿಶೀಲಿಸಿ ಅನುಮತಿ ಕೊಡಲಾಗಿದೆ. ಬೇರೆಯವರು ಅರ್ಜಿ ಹಾಕಿದ್ರೂ ಪರಿಶೀಲಿಸ್ತೇವೆ. ನಾವು ರಾಷ್ಟ್ರಪ್ರೇಮ ಕಲಿಸುತ್ತೇವೆ ಅರ್ಜಿಕೊಡಲಿ. ನಾವು ಆಗ ಎಲ್ಲವನ್ನ ಪರಿಶೀಲಿಸ್ತೇವೆ. ಯಾವುದೇ ಸಂಘಟನೆ, ಸಂಸ್ಥೆಗಳು ಬರಲಿ, ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ ಕಲಿಸ್ತೇವೆಂದು ಬರಲಿ. ನಾವು ಪರಿಶೀಲನೆ ಮಾಡಿ ಕೊಡ್ತೇವೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶವಿದೆ ಎಂದು ವಿವರಿಸಿದರು.
ಇದನ್ನೂ ಓದಿ:ಎಫ್‌ಐಆರ್ ದಾಖಲಾದ 24 ಗಂಟೆಯಲ್ಲಿ ವೆಬ್ಸೈಟ್ನಲ್ಲಿ ಪ್ರಕಟಿಸುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ