ಬೆಂಗಳೂರು :ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ವಸ್ತುಗಳ ಬೆಲೆ ಶೇ.40ರಷ್ಟು ಹೆಚ್ಚಾಗಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ 4000 ರೂಪಾಯಿಗೆ ನಡೆಸಬಹುದಾಗಿದ್ದ ಜೀವನ ನಿರ್ವಹಣೆ ವೆಚ್ಚ ಈಗ 10000 ರೂಪಾಯಿಗೆ ತಲುಪಿದೆ ಎಂದ್ರು.
ಈ ವಿಚಾರವನ್ನು ಪ್ರಸ್ತಾಪಿಸಿದರೂ ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್, ಇಂಧನ ಬೆಲೆ ಇಳಿಕೆ ಮಾಡಲು ಸಾಧ್ಯವಿಲ್ಲ. ದೇಶ ಮುನ್ನಡೆಸುವುದು ಕಷ್ಟ ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ. ಜನ ಹೇಗೆ ಪ್ರತಿಕ್ರಿಯೆ ನೀಡಬೇಕು ತಿಳಿಯದೇ ಸುಮ್ಮನೆ ಕುಳಿತು ಬಿಟ್ಟಿದ್ದಾರೆ. ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಏನು ಮಾಡಬೇಕೆಂಬ ಅರಿವಿಲ್ಲದೆ ಜನ ಗೊಂದಲಕ್ಕೆ ಸಿಲುಕಿದ್ದಾರೆ. ದೇಶದ ಎರಡು ಲಕ್ಷ ಕೋಟಿಯಷ್ಟು ಆದಾಯ ಕಡಿಮೆ ಆಗಿದೆ. ದೇಶದ ಶೇ.90ರಷ್ಟು ಜನರ ಆರ್ಥಿಕ ಸ್ಥಿತಿ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಆಗಿದೆ ಎಂದು ಹೇಳಿದ್ರು.
ಶ್ರೀಮಂತರ ಆದಾಯ ಹೆಚ್ಚಾಗುತ್ತಿದೆ :ಅದಾನಿ ಅವರ ಸಂಪತ್ತು ಕಳೆದ ಒಂದು ವರ್ಷದಲ್ಲಿ 3 ಲಕ್ಷ ಕೋಟಿ ರೂಪಾಯಿ ಹೆಚ್ಚಾಗಿದೆ. ಹಳೆಯ ಸಂಪಾದನೆಗೆ ಇದು ಸೇರ್ಪಡೆಯಾಗಿದೆ. ಒಟ್ಟಾರೆ 43 ಬಿಲಿಯನ್ ಡಾಲರ್‌ನಷ್ಟು ಆದಾಯ ಹೆಚ್ಚಳವಾಗಿದೆ. ಶ್ರೀಮಂತರ ಸಂಪತ್ತು ಹೆಚ್ಚಾಗುತ್ತಿದೆ, ಬಡವರು ಇನ್ನಷ್ಟು ಬಡತನಕ್ಕೆ ಸಿಲುಕುತ್ತಿದ್ದಾರೆ. ಇವರ ಆದಾಯ ಶೇ.35ರಷ್ಟು ಹೆಚ್ಚಳ ಆಗುತ್ತಿದೆ.
ಎನ್ಡಿಎ ವಿರುದ್ಧ ಗುಂಡೂರಾವ್ ವಾಗ್ದಾಳಿ ಕಾರ್ಮಿಕರು, ಕೃಷಿಕರು, ವ್ಯಾಪಾರಿಗಳು ಸೇವಾವಲಯದಲ್ಲಿ ಇರುವವರು ಸೇರಿದಂತೆ ಎಲ್ಲರ ಆದಾಯ ಕಡಿಮೆಯಾಗುತ್ತಿದೆ. ಇವರಿಗೆ ಸರ್ಕಾರ ಕಲ್ಪಿಸುತ್ತಿರುವ ಪರಿಹಾರ ಏನು? ಮುಂದಿನ ದಿನಗಳಲ್ಲಿ ದೇಶದ ಪರಿಣಾಮ ಏನಾಗಲಿದೆ. ದೇಶದ ಸ್ಥಿತಿ ಅಧೋಗತಿಗೆ ತಲುಪಲಿದೆ. ಎರಡು ಲಕ್ಷ ಕೋಟಿ ರೂಪಾಯಿನಷ್ಟು ಮೊತ್ತದ ಆದಾಯ ಕೇಂದ್ರ ಸರ್ಕಾರಕ್ಕೆ ಬರುವುದು ಕಡಿತವಾಗಿದೆ. ಕಾರ್ಪೊರೇಟ್ ಕಂಪನಿಗಳಿಗೆ ತೆರಿಗೆ ವಿನಾಯಿತಿ ನೀಡಿರುವುದು ಇದಕ್ಕೆ ಕಾರಣ. ಆದರೆ, ಬಡವರಿಗೆ ಸರ್ಕಾರ ಯಾವುದೇ ವಿನಾಯಿತಿ ನೀಡಿಲ್ಲ ಎಂದರು.
ರಾಜ್ಯ ಸರ್ಕಾರದ ವಿರುದ್ಧ ಬೇಸರ :ರಾಜ್ಯ ಸರ್ಕಾರ ಸಹ ಜನಹಿತ ಕಾರ್ಯವನ್ನು ಮಾಡುತ್ತಿಲ್ಲ. ಇಂದಿನಿಂದ ಲಾಕ್ಡೌನ್ನಲ್ಲಿ ಒಂದಿಷ್ಟು ನಿರಾಳತೆ ನೀಡಲಾಗಿದೆ. ಈವರೆಗೂ ಜನಜೀವನ ನಿರ್ವಹಣೆ ಕಷ್ಟಸಾಧ್ಯವಾಗಿತ್ತು. ಇವರಿಗಾಗಿ ರಾಜ್ಯ ಸರ್ಕಾರ ಯಾವ ರೀತಿ ಪ್ಯಾಕೇಜ್ ನೀಡಿದೆ? ಕಾರ್ಮಿಕ ವಲಯ ಸಂಕಷ್ಟಕ್ಕೆ ಸಿಲುಕಿದೆ, ಕೈಗಾರಿಕೆಗಳು ಸಂಕಷ್ಟಕ್ಕೆ ತುತ್ತಾಗಿವೆ.
ಜನರು ಜೀವನ ನಿರ್ವಹಿಸುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಿದ್ಯುತ್ ಶುಲ್ಕವನ್ನು ಹೆಚ್ಚಿಸಿದೆ. ಬಡವರಿಗೆ ಇನ್ನಷ್ಟು ಸಂಕಷ್ಟ ಉಂಟುಮಾಡಿದೆ. ಇನ್ನು, ಆರು ತಿಂಗಳವರೆಗೆ ಕಾಯುವ ಅವಕಾಶ ಇತ್ತು. ಜನರ ಮೇಲೆ ಇಷ್ಟು ಬೇಗ ಹೊರೆ ಹೊರಿಸುವ ಅಗತ್ಯ ಇರಲಿಲ್ಲ ಎಂದ್ರು. ರಸಗೊಬ್ಬರದ ಬೆಲೆ ಹೆಚ್ಚಳವಾಗಿದೆ. ಹಣದುಬ್ಬರ ಹೆಚ್ಚಾದಾಗ ಎಲ್ಲ ಬೆಲೆ ಹೆಚ್ಚಾಗುತ್ತದೆ. ರಾಜ್ಯ ಸರ್ಕಾರ ರೈತರಿಗೆ ಸಹಾಯ ಮಾಡುತ್ತಿಲ್ಲ.
ಜನರಿಗೆ ಕೋವಿಡ್ ಸಂದರ್ಭದಲ್ಲಿ ಯಾವುದೇ ರೀತಿಯ ಪರಿಹಾರ ಕಲ್ಪಿಸಿಲ್ಲ. ಅತ್ಯಂತ ಕಡಿಮೆ ಸಂಖ್ಯೆಯ ಜನರಿಗೆ ಪರಿಹಾರ ದೊರಕಿದೆ. ಪ್ರತಿಪಕ್ಷಗಳು ಹಾಗೂ ಜನರ ಹೋರಾಟಕ್ಕೆ ಮಣಿದು ಸರ್ಕಾರ ಕೆಲವರಿಗೆ ಮಾತ್ರ ಪರಿಹಾರ ಘೋಷಿಸುವ ಕಾರ್ಯ ಮಾಡಿದೆ. ಯಾರಿಗೆ ಪರಿಹಾರ ಘೋಷಿಸಿದೆ? ಯಾರಿಗೆ ಇದರಿಂದ ಸಹಾಯವಾಗುತ್ತದೆ? ಕೊಡುವ 2000 ರೂಪಾಯಿಗಾಗಿ ಆಟೋಚಾಲಕರು ಹಾಗೂ ಕಾರ್ಮಿಕರು ಅದಕ್ಕಿಂತ ಹೆಚ್ಚಿನ ಹಣವನ್ನು ಓಡಾಟಕ್ಕೆ ಖರ್ಚು ಮಾಡುವ ಸ್ಥಿತಿ ಇದೆ. ಜನರ ಜೀವನ ವೆಚ್ಚ ಹೆಚ್ಚಾಗುತ್ತಿದೆ. ಜೊತೆಗೆ ಬರುವ ಆದಾಯ ಬರುತ್ತಿಲ್ಲ. ಈ ಸಂದರ್ಭ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಸಹಾಯಕ್ಕೆ ಬರಬೇಕು. ಕೂಡಲೇ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.
ಸಹಾಯ ಮಾಡಿ :ಪ್ರತಿಯೊಬ್ಬ ಬಿಪಿಎಲ್ ಕಾರ್ಡ್‌ದಾರರಿಗೆ ತಲಾ 10 ಸಾವಿರ ರೂಪಾಯಿ ಪರಿಹಾರ ನೀಡುವ ಕಾರ್ಯವನ್ನು ಸರ್ಕಾರ ಮಾಡಬೇಕು. ಏಕಕಾಲಕ್ಕೆ ನೀಡಲು ಸಾಧ್ಯವಾಗದಿದ್ದರೆ ಎರಡು ಕಂತಿನಲ್ಲಾದರೂ ಪಾವತಿಸುವ ಕಾರ್ಯ ಮಾಡಬೇಕು. ಆಗ ಮಾತ್ರ ಅರ್ಹರಿಗೆ ಅನುಕೂಲ ಸಿಗಲು ಸಾಧ್ಯ. ಈ ಕಾರ್ಯ ಮಾಡಿದರೆ ಮಾತ್ರ ಜನಪರ ಸರ್ಕಾರ ಎನಿಸಿಕೊಳ್ಳಬಹುದು. ಇಲ್ಲವಾದರೆ ಬೂಟಾಟಿಕೆ ಸರ್ಕಾರ ಎಂದು ಆಪಾದನೆ ಮಾಡಬೇಕಾಗುತ್ತದೆ.
ಆಸ್ತಿ ತೆರಿಗೆ ಪಾವತಿದಾರರಿಗೆ ಶೇ.50ರಷ್ಟು ವಿನಾಯಿತಿ ನೀಡಿ. ಈ ಒಂದು ವರ್ಷ ಆ ಕಾರ್ಯ ಮಾಡಿ. ಈ ಸಂದರ್ಭ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಜನರಿಗೆ ಸಹಾಯ ಮಾಡುತ್ತಿದ್ದೆವು. ಸಿದ್ದರಾಮಯ್ಯ ಇಲ್ಲ ಬೇರೆ ಯಾವುದೇ ಕಾಂಗ್ರೆಸ್ ನಾಯಕರು ಸಿಎಂ ಆಗಿದ್ದರೆ ಈ ಸಂದರ್ಭ ಜನರ ಸಹಾಯಕ್ಕೆ ಧಾವಿಸುತ್ತಿದ್ದರು. ಹಿಂದೆ ನಮ್ಮ ಸರ್ಕಾರ ಇದ್ದಾಗ 10 ಕೆಜಿ ಅಕ್ಕಿ ನೀಡುತ್ತಿದ್ದೆವು. ಆದರೆ, ಇಂದು ಸರ್ಕಾರ ಅದನ್ನು ಎರಡು ಕೆಜಿಗೆ ಇಳಿಸಿದೆ. ಏನು ಸಮಸ್ಯೆ ಇಲ್ಲದ ಸಂದರ್ಭದಲ್ಲಿಯೇ ನಾವು ಜನರ ಅಗತ್ಯಕ್ಕಾಗಿ ಮೂರು ರೂಪಾಯಿಗೆ ಕೆಜಿ ಅಕ್ಕಿ ನೀಡಿದ್ದೆವು.
ಈ ಸಂದರ್ಭದಲ್ಲಿ ನಾವು ಅಧಿಕಾರದಲ್ಲಿದ್ದರೆ ಇನ್ನಷ್ಟು ಸಹಾಯ ಮಾಡುತ್ತಿದ್ದೆವು. ಈ ಸಂದರ್ಭ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇರಬೇಕಿತ್ತು ಎಂದು ಆಶಯ ವ್ಯಕ್ತಪಡಿಸಿದರು. ಮೋದಿ ಮತ್ತು ಯಡಿಯೂರಪ್ಪ ಸರ್ಕಾರಗಳು ದೇಶದ ಆರ್ಥಿಕ ಪರಿಸ್ಥಿತಿಗೆ ಗದಾಪ್ರಹಾರ ಮಾಡಿವೆ. ಅವರ ಹೃದಯದಲ್ಲಿ ಕಿಂಚಿತ್ತು ಸಹಾಯ ಮಾಡುವ ಭಾವನೆ ವ್ಯಕ್ತವಾಗುತ್ತಿಲ್ಲ. ಇನ್ನಾದರೂ ಇಂಧನ ಬೆಲೆ ಇಳಿಕೆಗೆ ನಿರ್ಧಾರ ಕೈಗೊಳ್ಳಬೇಕು.
ಇಂಧನವನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸಿದರೆ ಬಹಳ ಅನುಕೂಲ ಆಗಲಿದೆ. ಜನರ ಜೇಬಿಗೆ ಹಣ ಹಾಕುವ ಕಾರ್ಯವನ್ನು ಸರ್ಕಾರ ಮಾಡಿದರೆ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣಲಿದೆ. ದೇಶಕ್ಕೆ ಸ್ವಾತಂತ್ರ ಬಂದ ನಂತರವೇ ಈ ಮಟ್ಟಕ್ಕೆ ಜಿಡಿಪಿ ಕುಸಿತ ಕಂಡಿರಲಿಲ್ಲ. ಯಾವ ರೀತಿ ದೇಶದ ಆರ್ಥಿಕ ಸ್ಥಿತಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೀರಾ? ಅಂಬಾನಿ-ಅದಾನಿ ಅವರು ದೇಶದ ಆರ್ಥಿಕ ಸ್ಥಿತಿಯನ್ನು ತಮ್ಮ ಹಿಡಿತಕ್ಕೆ ಪಡೆಯುತ್ತಿದ್ದಾರೆ. ಮೋದಿಯವರು ದೇಶವನ್ನು ಯಾವ ರೀತಿ ಇಂಥವರಿಂದ ಕಾಪಾಡುತ್ತಾರೆ ಎಂದು ಪ್ರಶ್ನಿಸಿದರು.
ಸರ್ಕಾರಕ್ಕೆ ದೇಶದ ಜನರ ಬಗ್ಗೆ ಯಾವುದೇ ಒಳ್ಳೆಯ ಭಾವನೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾಗೆ ದೇಶದ ಬಗ್ಗೆ ಯಾವುದೇ ಕಾಳಜಿ ಇಲ್ಲ. ಕೇವಲ ಚುನಾವಣೆ ಗೆಲ್ಲುವುದು ಒಂದೇ ಇವರ ಆಶಯ. ಚುನಾವಣೆ ಸಂದರ್ಭದಲ್ಲಿ ಇಂಧನ ಬೆಲೆ ಏರಿಕೆ ಮಾಡದ ಸರ್ಕಾರ ನಂತರ 20 ಬಾರಿ ಬೆಲೆ ಏರಿಕೆ ಮಾಡಿದೆ. ದೇಶದ ಜನ ಬಹಳ ಬುದ್ಧಿವಂತರು. ಆದಷ್ಟು ಬೇಗ ಬದಲಾವಣೆಯ ಒಳ್ಳೆಯ ತೀರ್ಮಾನ ಕೈಗೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.