ಬೆಂಗಳೂರು:ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಸೇವೆಗೆ ಹಾಜರಾಗುವ ನಿರ್ಧಾರ ಪ್ರಕಟಿಸಿದ್ದು, ನಾಳೆಯಿಂದ ನಮ್ಮ ನೌಕರರ ಸಹಕಾರದಿಂದ ಸಾರಿಗೆ ಸೇವೆಯು ಬಹುತೇಕ ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಇಂದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಾರಿಗೆ ನೌಕರರು ಸ್ವಯಂ ಪ್ರೇರಣೆಯಿಂದ ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಸುಮಾರು 13 ಸಾವಿರಕ್ಕೂ ಹೆಚ್ಚು ಬಸ್ಗಳು ಸಂಚರಿಸುವಂತಾಗಿದೆ. ಕೋವಿಡ್‍ನಂತಹ ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲೂ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಸಾರಿಗೆ ಸೇವೆ ಲಭ್ಯವಾಗಿ ನಿಟ್ಟುಸಿರು ಬಿಡುವಂತಾಯಿತು. ಹೀಗೆ ಕರ್ತವ್ಯ ಪ್ರಜ್ಞೆ ಮೆರೆದವರಿಗೆ ಹಾರ್ದಿಕ ಅಭಿನಂದನೆಗಳು. ಅದೇ ರೀತಿ ಮುಷ್ಕರದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಮುಂದಾಗಬೇಕೆಂದು ಖಾಸಗಿ ವಾಹನ ಮಾಲೀಕರಲ್ಲಿ ಕೋರಿಕೊಂಡಾಗ ಅವರೂ ಸಹ ತುಂಬು ಹೃದಯದಿಂದ ಸಹಕಾರ ನೀಡಿದ್ದನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದು ಪತ್ರಿಕಾ ಹೇಳಿಕೆ ಮೂಲಕ ಡಿಸಿಎಂ ತಿಳಿಸಿದ್ದಾರೆ.
ನಾಳೆಯಿಂದ ಪೂರ್ಣ ಪ್ರಮಾಣದ ಸಾರಿಗೆ ಸೇವೆ: ಡಿಸಿಎಂ ಸವದಿ ಘೋಷಣೆ
ಮುಷ್ಕರದ ವೇಳೆ ಕೆಲ ನೌಕರರ ಕರ್ತವ್ಯ ನಿಷ್ಠೆ ಮತ್ತು ಪರಿಶ್ರಮವನ್ನು ನಾವು ಎಂದಿಗೂ ಮರೆಯುವುದಿಲ್ಲ ಮತ್ತು ಅವರ ಹಿತಾಸಕ್ತಿಗಳನ್ನು ರಕ್ಷಿಸುವತ್ತ ನಮ್ಮ ಸರ್ಕಾರ ಯಾವತ್ತೂ ಸಹಾನುಭೂತಿ ಹೊಂದಿರುತ್ತದೆ ಎಂಬುದನ್ನು ಮತ್ತೊಮ್ಮೆ ಈ ಸಂದರ್ಭದಲ್ಲಿ ಸ್ಪಷ್ಟಪಡಿಸುತ್ತೇನೆ ಎಂದು ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ನಾಳೆಯಿಂದಲೇ ಸಾರಿಗೆ ಸೇವೆ ಸುಗಮ:
ನಾಳೆಯಿಂದ ನಮ್ಮ ನೌಕರರ ಸಹಕಾರದಿಂದ ಸಾರಿಗೆ ಸೇವೆಯು ಬಹುತೇಕ ಪೂರ್ಣಪ್ರಮಾಣದಲ್ಲಿ ಸುಗಮಗೊಳ್ಳುತ್ತದೆ ಎಂಬ ವಿಶ್ವಾಸ ಮೂಡುವಂತಾಗಿರುವುದು ಸಂತೋಷದ ಸಂಗತಿಯಾಗಿದೆ. ಮುಷ್ಕರದ ಸಂದರ್ಭದಲ್ಲಿಯೂ ಹಲವು ಮಂದಿ ಸಾರಿಗೆ ನೌಕರರು ಸರ್ಕಾರದ ಮನವಿಗೆ ಸ್ಪಂದಿಸಿ ಕರ್ತವ್ಯ ಪ್ರಜ್ಞೆ ಮೆರೆದು ಸಾರ್ವಜನಿಕರಿಗೆ ಈ ಸಂಕಷ್ಟದ ಕಾಲದಲ್ಲಿಯೂ ಸೇವೆ ಒದಗಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಇಂತಹವರ ಕರ್ತವ್ಯ ನಿಷ್ಠೆ ಮತ್ತು ಪರಿಶ್ರಮವನ್ನು ನಾವು ಎಂದಿಗೂ ಮರೆಯುವುದಿಲ್ಲ ಮತ್ತು ಅವರ ಹಿತಾಸಕ್ತಿಗಳನ್ನು ರಕ್ಷಿಸುವತ್ತ ನಮ್ಮ ಸರ್ಕಾರ ಯಾವತ್ತೂ ಸಹಾನುಭೂತಿ ಹೊಂದಿರುತ್ತದೆ ಎಂಬುದನ್ನು ಮತ್ತೊಮ್ಮೆ ಈ ಸಂದರ್ಭದಲ್ಲಿ ಸ್ಪಷ್ಟಪಡಿಸುತ್ತೇನೆ ಎಂದು ತಿಳಿಸಿದ್ದಾರೆ.
ಇಡೀ ದೇಶದಲ್ಲೇ ನಮ್ಮ ಸಾರಿಗೆ ನಿಗಮಗಳಿಗೆ ವಿಶೇಷವಾದ ವರ್ಚಸ್ಸಿದೆ. ಈ ವರ್ಚಸ್ಸು ಬೆಳೆಸುವಲ್ಲಿ ಅನೇಕ ಮಹನೀಯರುಗಳ ಪರಿಶ್ರಮ ಮತ್ತು ಕೊಡುಗೆಗಳಿವೆ. ಆದ್ದರಿಂದ ಅವರ ಶ್ರಮವನ್ನು ಗೌರವಿಸುತ್ತಾ, ನಾಡಿನಲ್ಲಿ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಎಲ್ಲ ನೌಕರರ ಜವಾಬ್ದಾರಿಯಾಗಿದೆ. ಇದರಿಂದ ಕರ್ನಾಟಕದ ಸರ್ಕಾರಿ ಸಾರಿಗೆಯ ಗತ ವೈಭವ ಮತ್ತೆ ಮರುಕಳಿಸಲು ಸಾಧ್ಯವಾಗುತ್ತದೆ ಎಂದು ಡಿಸಿಎಂ ಸವದಿ ಅಭಿಪ್ರಾಯಪಟ್ಟಿದ್ದಾರೆ.