ಬೆಂಗಳೂರು: ಇನ್ನು ಮುಂದೆ ಬೆಂಗಳೂರು ನಗರದಲ್ಲಿ ಯಾರೂ ಕೂಡ ಫ್ಲೆಕ್ಸ್, ಹೋರ್ಡಿಂಗ್ಸ್ ಹಾಕುವ ಹಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಕುಮಾರ ಕೃಪಾ ಅತಿಥಿ ಗೃಹದಲ್ಲಿ ಇಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಇನ್ನು ಬೆಂಗಳೂರಾದ್ಯಂತ ಫ್ಲೆಕ್ಸ್ ಸಂಪೂರ್ಣವಾಗಿ ನಿಷೇಧ ಮಾಡುತ್ತೇವೆ. ಅನಧಿಕೃತ ಫ್ಲೆಕ್ಸ್ಗಳಿಂದ ನನಗೆ ಅಸಹ್ಯ ಆಗುತ್ತಿದೆ. ಕೋರ್ಟ್ನಿಂದ ಕೂಡ ನಿರ್ದೇಶನ ಇದೆ. ಎಲ್ಲಾ ಫ್ಲೆಕ್ಸ್, ಹೋರ್ಡಿಂಗ್ ತೆಗೆಯಲು ಸೂಚನೆ ನೀಡಲಾಗಿದೆ. ಬೆಂಗಳೂರಿನಾದ್ಯಂತ ಆ.15ರೊಳಗೆ ಎಲ್ಲಾ ಫ್ಲೆಕ್ಸ್, ಹೋರ್ಡಿಂಗ್ಸ್ ತೆರವು ಮಾಡಬೇಕು ಎಂದು ಹೇಳಿದ್ದಾರೆ.
ಯಾರಾದರು ಫ್ಲೆಕ್ಸ್, ಹೋರ್ಡಿಂಗ್ಸ್ ಹಾಕಿದ್ದು ಕಂಡುಬಂದರೆ ಅಂತವರಿಗೆ ದಂಡ ಹಾಕಬೇಕು. ಯಾರು ಅನಧಿಕೃತವಾಗಿ ಫ್ಲೆಕ್ಸ್ ಹಾಕುತ್ತಾರೋ ಅವರಿಗೆ 50,000 ರೂ. ದಂಡ ಹಾಕಲು ಸೂಚನೆ ನೀಡಲಾಗಿದೆ. ಯಾವ ಪಾರ್ಟಿಯವರೂ ಹಾಕುವುದು ಬೇಡ. ಸಿಎಂ ಅವರ ಫ್ಲೆಕ್ಸ್ ಹಾಕುವ ಹಾಗಿಲ್ಲ. ಡಿಕೆಶಿ ಫ್ಲೆಕ್ಸ್ ಹಾಕುವ ಹಾಗಿಲ್ಲ. ಯಾರ ಶಿಫಾರಸು ನಡೆಯುವುದಿಲ್ಲ ಎಂದು ಡಿಕೆಶಿ ಖಡಕ್ ಸಂದೇಶ ನೀಡಿದ್ದಾರೆ.
ಅನಿವಾರ್ಯತೆ ಇದ್ದರೆ, ಸರ್ಕಾರದ ಕೆಲ ಯೋಜನೆಗಳ ಬಗ್ಗೆ ಹಾಕುವುದಾದರೆ ಅದಕ್ಕೆ ಸೀಮಿತ ಅವಕಾಶ ನೀಡುವ ಬಗ್ಗೆ ನೀತಿ ತರುತ್ತೇವೆ. ಹೈಕೋರ್ಟ್ ಅನಧಿಕೃತ ಹೋರ್ಡಿಂಗ್ಸ್ ತೆಗೆಯಲು ಮೂರು ವಾರಗಳ ಸಮಯಾವಕಾಶ ನೀಡಿದೆ. ಹಾಗಾಗಿ ಇನ್ನು ಮುಂದೆ ಬೆಂಗಳೂರು ನಗರದಲ್ಲಿ ಫ್ಲೆಕ್ಸ್ ಹಾಕುವ ಹಾಗಿಲ್ಲ. ಹುಟ್ಟುಹಬ್ಬ ಶುಭಾಶಯ, ಧಾರ್ಮಿಕ, ರಾಜಕೀಯ ವಿಚಾರದ ಫ್ಲೆಕ್ಸ್ ಯಾವುದನ್ನೂ ಹಾಕುವ ಹಾಗಿಲ್ಲ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ನಿರ್ಧಾರ ಬರಲಾಗಿದೆ. ನಗರದಲ್ಲಿ ಸುಮಾರು 59,400 ಅನಧಿಕೃತ ಫ್ಲೆಕ್ಸ್ಗಳಿದ್ದು, ಈ ಪೈಕಿ ಸುಮಾರು 58,000 ಫ್ಲೆಕ್ಸ್ ತೆರವು ಮಾಡಲಾಗಿದೆ. ಈವರೆಗೆ ಸುಮಾರು 134 ದೂರುಗಳು ದಾಖಲು ಮತ್ತು 40 ಎಫ್ಐಆರ್ ದಾಖಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಯಾರ ಹೊಟ್ಟೆ ಮೇಲೂ ಹೊಡೆಯಲ್ಲ:ಗುತ್ತಿಗೆದಾರರ ದೂರು ವಿಚಾರವಾಗಿ ಪ್ರತಿಕ್ರಿಯಿಸಿ, ಗುತ್ತಿಗೆದಾರರು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ನೋವಾದವರು ದೂರು ಕೊಡವುದು ತಪ್ಪೇನಿಲ್ಲ. ಯಾರ ಹೊಟ್ಟೆ ಮೇಲೂ ಹೊಡೆಯವುದಿಲ್ಲ. ಕೆಲಸ ಮಾಡಿದವರಿಗೆ ಬಿಲ್ ಪಾವತಿ ಮಾಡಲಾಗುತ್ತದೆ ಎಂದು ಡಿಕೆಶಿ ಸ್ಪಷ್ಟಪಡಿಸಿದರು.