ಬೆಂಗಳೂರು:ಯಾರಾದರು ಕರೆದರೆ ಊಟಕ್ಕೆ ಹೋಗಬಾರದೇ? ಊಟವನ್ನೇ ಮಾಡಬೇಡಿ ಅಂದರೆ ಹೇಗೆ! ಹಬ್ಬಕ್ಕೆ ಕರೆದ ಹಿನ್ನೆಲೆ ಅವರೆಲ್ಲ ಹೋಗಿ ಬಂದಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಿಳಿಸಿದ್ದಾರೆ.
ನಿನ್ನೆ ಕಾಂಗ್ರೆಸ್ ನಾಯಕರು ಬಿರಿಯಾನಿ ಸವಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಉಗ್ರಪ್ಪ, ಸ್ನೇಹಿತರು ಊಟಕ್ಕೆ ಕರೆದರು ಎಂದು ಹೋಗಿದ್ದಾರೆ ವಿನಃ, ಇಂತಹ ಪರಿಸ್ಥಿತಿಯಲ್ಲಿ ಯಾರಾದರು ಬಿರಿಯಾನಿ ಹಾಕಿಸಿದರೆ ತಿನ್ನೋಣ ಎಂದು ಹೋಗಿಲ್ಲ. ಹಬ್ಬದ ಸಂದರ್ಭಲ್ಲಿ ಈ ರೀತಿ ಕರೆದಾಗ ಹೋಗಲೇಬೇಕಾಗುತ್ತದೆ. ಕರೆದಾಗ ಬರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನಿನ್ನೆ ತೆರಳಿದವರು ಕೆಲವರು ತಿಂದಿದ್ದಾರೆ ಮತ್ತೆ ಕೆಲವರು ತಿಂದಿಲ್ಲ. ಯಾರು ಏನನ್ನು ತಿಂದರು ಅನ್ನುವುದು ಈ ಸಂದರ್ಭದಲ್ಲಿ ದೊಡ್ಡ ವಿಷಯವೇ ಅಲ್ಲ ಎಂದರು.
ಬಿರಿಯಾನಿ ತಿನ್ನೋ ಆಸೆಗೆ ಯಾರು ಹೋಗಿಲ್ಲ: ಉಗ್ರಪ್ಪ ನಮ್ಮಲ್ಲಿ ಒಬ್ಬ ನಾಯಕರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಆಗಿದೆ. ಉಳಿದವರು ಸ್ಥಳದಲ್ಲಿ ಇದ್ದು ನೆರೆ ಸಂತ್ರಸ್ತರನ್ನು ಭೇಟಿ ಮಾಡಿ, ಪರಿಹಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಎಚ್.ಕೆ ಪಾಟೀಲ್, ಡಿಕೆ ಶಿವಕುಮಾರ್ ಆರ್.ವಿ. ದೇಶಪಾಂಡೆ ಮತ್ತಿತರ ನಾಯಕರು ನೆರೆಪೀಡಿತ ಪ್ರದೇಶದಲ್ಲಿಯೇ ಇದ್ದು ಪರಿಹಾರ ಕ್ರಮ ಕೈಗೊಳ್ಳುತ್ತಿದ್ದಾರೆ. ಪಕ್ಷದ ವತಿಯಿಂದ ಕೂಡ ನಾವು 41.50 ಲಕ್ಷ ರೂ ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದೇವೆ. ನಮ್ಮ ಎರಡು ತಂಡ ಸಕ್ರಿಯವಾಗಿವೆ. ವೈದ್ಯರ ಸಲಹೆಯಂತೆ ಸಿದ್ದರಾಮಯ್ಯ ಹೋಗಿಲ್ಲ. ಖರ್ಗೆಯವರು ಕಲಬುರಗಿಗೆ ಭೇಟಿ ನೀಡಿದ್ದಾರೆ. ವಿಜಯಪುರದಲ್ಲಿ ಎಂಬಿ ಪಾಟೀಲರು ಪರಿಶೀಲಿಸಿದ್ದಾರೆ. ಪ್ರತಿಪಕ್ಷವಾಗಿ ಇದಕ್ಕಿಂತ ಇನ್ನೇನು ಹೆಚ್ಚಿನದನ್ನು ನಾವು ಮಾಡಲು ಸಾಧ್ಯ? ಎಂದರು.
2009ರಲ್ಲಿ ಯಡಿಯೂರಪ್ಪ ಏನ್ ಮಾಡಿದ್ರು? ಯೋಗಾಸನ ಹಾಕಿಕೊಂಡು ಸುತ್ತೂರಿನಲ್ಲಿ ಮಲಗಿದ್ರು. ರಾಜ್ಯದ ಹಲವೆಡೆ ತೀರ್ವ ಮಳೆ ಬಂದು ನಷ್ಟವಾಗಿತ್ತು. ಆಗ ಪ್ರಧಾನಿ ಮನಮೋಹನ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿದ್ರು. ಆಗ ಕಾಂಗ್ರೆಸ್ ನಾಯಕರು ಸಾಕಷ್ಟು ಸೇವಾ ಕಾರ್ಯದಲ್ಲಿ ತೊಡಗಿದ್ದರು. ಕಾಂಗ್ರೆಸ್ ಪಕ್ಷ ಯಾವ ಸಂದರ್ಭದಲ್ಲಿಯೂ ಜವಾಬ್ದಾರಿ ಮರೆತು ನಡೆದುಕೊಂಡಿಲ್ಲ ಎಂದರು.