ಕರ್ನಾಟಕ

karnataka

ETV Bharat / state

ವಾಕ್ ಸ್ವಾತಂತ್ರ್ಯ ಅಪಾಯದಲ್ಲಿದ್ದರೂ ಮಾಧ್ಯಮ ಕ್ಷೇತ್ರದ ಮೌನ ಸಲ್ಲದು: ಸಚಿವ ಎಚ್ ಕೆ ಪಾಟೀಲ - ಮಾಧ್ಯಮ ಕ್ಷೇತ್ರದ ಮೌನ ಸಲ್ಲದು

''ನಮ್ಮ ದೇಶದಲ್ಲಿ ಶೇ 50 ರಷ್ಟು ಮಾತ್ರ ವಾಕ್ ಸ್ವಾತಂತ್ರ್ಯ ಉಳಿದಿದ್ದು, ಇದರ ಅನುಭವ ಪ್ರತಿಯೊಬ್ಬರಿಗೂ ಆಗುತ್ತಿದೆ. ಇವೆಲ್ಲವೂ ಗೊತ್ತಿದ್ದರೂ ಸಹ ನಾವೆಲ್ಲರೂ ಮೌನಕ್ಕೆ ಶರಣಾಗಿದ್ದೇವೆ. ಇಂತಹ ಪರಿಸ್ಥಿತಿಯನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸನ್ನಿವೇಶ ಎದುರಾಗಿದೆ'' ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

Minister H.K. Patil
ವಾಕ್ ಸ್ವಾತಂತ್ರ್ಯ ಅಪಾಯದಲ್ಲಿದ್ದರೂ ಮಾಧ್ಯಮ ಕ್ಷೇತ್ರದ ಮೌನ ಸಲ್ಲದು: ಸಚಿವ ಎಚ್.ಕೆ. ಪಾಟೀಲ

By ETV Bharat Karnataka Team

Published : Oct 28, 2023, 10:31 PM IST

ಬೆಂಗಳೂರು:''ಮಾಧ್ಯಮಗಳಲ್ಲಿ ಗರ್ವದಿಂದ ಏನೇ ಚರ್ಚೆಗಳಾದರೂ ವಾಕ್ ಸ್ವಾತಂತ್ರ್ಯ ಇಂದು ಅಪಾಯದಲ್ಲಿದೆ. ದೊಡ್ಡ ಜಾತಿ, ಶ್ರೀಮಂತ ವ್ಯಕ್ತಿಗಳು, ಕೈಗಾರಿಕಾ ವಲಯಗಳ ವಿರುದ್ಧ ಬರೆಯಲು ಮಾಧ್ಯಮಗಳಿಗೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ'' ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಆತಂಕ ವ್ಯಕ್ತಪಡಿಸಿದರು.

ನಗರದ ಎಫ್.ಕೆ.ಸಿ.ಸಿ.ಐ ಸಭಾಂಗಣದಲ್ಲಿ ಶನಿವಾರ ಹಿರಿಯ ಪತ್ರಕರ್ತ ಹೊನಕೆರೆ ನಂಜುಂಡೇಗೌಡ ಅವರಿಗೆ 2023ನೇ ಸಾಲಿನ ''ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ'' ಪ್ರದಾನ ಮಾಡಿ ಮಾತನಾಡಿದ ಅವರು, ''ಮಾಧ್ಯಮಗಳು ಇಂದು ರಾಜಕೀಯ ಶಕ್ತಿ ಕೇಂದ್ರದಲ್ಲಿರುವವರ ವಿರುದ್ಧ ಬರೆಯುವುದನ್ನು ಕಡಿಮೆ ಮಾಡಿವೆ. ಮಾಲೀಕರಿಂದ ಮಾಧ್ಯಮ ಮಿತ್ರರಿಗೆ ಲಗಾಮು ಬಿದ್ದಿದ್ದು, ತನ್ನತನವನ್ನು ಪತ್ರಿಕೋದ್ಯಮದ ಜನರು ಕಳೆದುಕೊಂಡಿದ್ದಾರೆ. ಇಷ್ಟೊಂದು ಗಂಭೀರ ಸನ್ನಿವೇಶ ಇದ್ದರೂ ಸಹ ವಾಕ್ ಸ್ವಾತಂತ್ರ್ಯದ ಬಗ್ಗೆ ಪತ್ರಿಕೋದ್ಯಮಿಗಳ ಧ್ವನಿಯೇ ಇಲ್ಲದಂತಾಗಿದೆ'' ಎಂದು ಕಳವಳ ವ್ಯಕ್ತಪಡಿಸಿದರು.

''ನಮ್ಮ ದೇಶದಲ್ಲಿ ಶೇ 50 ರಷ್ಟು ಮಾತ್ರ ವಾಕ್ ಸ್ವಾತಂತ್ರ್ಯ ಉಳಿದಿದ್ದು, ಇದರ ಅನುಭವ ಪ್ರತಿಯೊಬ್ಬರಿಗೂ ಆಗುತ್ತಿದೆ. ಇವೆಲ್ಲವೂ ಗೊತ್ತಿದ್ದರೂ ಸಹ ನಾವೆಲ್ಲರೂ ಮೌನಕ್ಕೆ ಶರಣಾಗಿದ್ದೇವೆ. ಇಂತಹ ಪರಿಸ್ಥಿತಿಯನ್ನು ಗ್ರಹಿಸಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸನ್ನಿವೇಶ ಎದುರಾಗಿದೆ. ಹಿಂದೆ ಪತ್ರಿಕೋದ್ಯಮ ಹೇಗಿತ್ತು. ಈಗ ಹೇಗಿದೆ ಎಂದು ವಿಶ್ಲೇಷಣೆಯನ್ನು ಸದಾ ಮಾಡುತ್ತಿರುತ್ತೇನೆ. ಹಿಂದೆ ಪತ್ರಿಕಾಗೋಷ್ಟಿಗಳಿಗೆ ಬರಬೇಕಾಗಿದ್ದರೆ ತಲೆ ಕೆರೆದುಕೊಂಡು ಬರುತ್ತಿದ್ದೆವು. ಇಂದು ತಲೆ ಬಾಚಿಕೊಂಡು ಧೈರ್ಯದಿಂದ ಬರುತ್ತಿದ್ದೇವೆ. ತಲೆ ಬಾಚಿಕೊಂಡರೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಚೆನ್ನಾಗಿ ಕಾಣುತ್ತೇವೆ. ಹಿಂದಿನ ಮತ್ತು ಈಗಿನ ಸನ್ನಿವೇಶವನ್ನು ನಾವು ಓರೆಗೆ ಹಚ್ಚಬೇಕಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.

''ವರ್ಷದ 365 ದಿನಗಳಲ್ಲಿ 100 ದಿನಗಳ ಕಾಲ ಒಬ್ಬರನ್ನೊಬ್ಬರು ದೂಷಣೆ ಮಾಡುವುದನ್ನು ವೃತ್ತ ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿ ಮಾಡಲಾಗುತ್ತಿದೆ. ವಿಚಿತ್ರವೆಂದರೆ ಇಲ್ಲಿ ಇಬ್ಬರೂ ಹೇಳುತ್ತಿರುವುದು ಕೂಡ ಸುಳ್ಳು ಎಂಬುದು ಎಲ್ಲರಿಗೂ ತಿಳಿದಿರುತ್ತದೆ. ವಿದ್ಯುನ್ಮಾನ ಮಾಧ್ಯಮಗಳ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ. ಇಂತಹ ಕಾಲಘಟ್ಟದಲ್ಲಿ ಖಾದ್ರಿ ಶಾಮಣ್ಣ ಟ್ರಸ್ಟ್ ಮೂಲಕ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಜನ ಜಾಗೃತಿ ಮೂಡಿಸಬೇಕು. ಹತ್ತು ಮಂದಿ ಹಿರಿಯ ಪತ್ರಕರ್ತರು ಮುಂದೆ ನಿಂತು ವಾಕ್ ಸ್ವಾತಂತ್ರ್ಯದ ಮೌಲ್ಯಗಳನ್ನು ಎತ್ತಿ ಹಿಡಿಯಲು ನಿಲ್ಲದಿದ್ದರೆ, ನಾವೆಲ್ಲರೂ ಕರ್ತವ್ಯಲೋಪ ಮಾಡಿಕೊಂಡಂತಾಗುತ್ತದೆ'' ಎಂದು ಕಿವಿ ಮಾತು ಹೇಳಿದರು.

''ಪ್ರಶಸ್ತಿಗಾಗಿ ಅರ್ಜಿ ಕರೆಯದೇ ಇರುವುದು ಒಳ್ಳೆಯ ಬೆಳವಣಿಗೆ. ಇಲ್ಲವಾಗಿದ್ದಲ್ಲಿ ನನ್ನನ್ನು ಒಳಗೊಂಡಂತೆ ರಾಜಕಾರಣಿಗಳು ಮತ್ತಿತರಿಂದ ನಿಮಗೆ ಶಿಫಾರಸ್ಸುಗಳ ಮಹಾಪೂರವೇ ಹರಿದು ಬರುತ್ತಿತ್ತು. ರಾಜ್ಯೋತ್ಸವ ಪ್ರಶಸ್ತಿಗಾಗಿ ಸರ್ಕಾರಕ್ಕೆ 27 ಸಾವಿರ ಅರ್ಜಿಗಳು ಬಂದಿವೆ. ಹೀಗಿರುವಾಗ ಅರ್ಹರನ್ನು ಹೇಗೆ ಆಯ್ಕೆ ಮಾಡುವುದು ಎಂಬ ಆತಂಕ ಎದುರಾಗಿದೆ. ಆದರೆ, ಪ್ರಶಸ್ತಿಗಾಗಿ ಟ್ರಸ್ಟ್ ಆಯ್ಕೆಯನ್ನು ಇಡೀ ಕರ್ನಾಟಕ ಒಪ್ಪುತ್ತದೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾಪ್ರಗತಿ ಪತ್ರಿಕೆಯ ಸಂಪಾದಕ ಎಸ್. ನಾಗಣ್ಣ ಮಾತನಾಡಿ, ''ಪತ್ರಿಕೆಗಳನ್ನು ಓದದೇ ಇರುವವರು ಪತ್ರಿಕೆಗಳಿಗೆ ವರದಿ ಮಾಡುವ ದುರಂತದ ಸನ್ನಿವೇಶದಲ್ಲಿ ನಾವಿದ್ದೇವೆ. ಇಂತಹ ಮಾಧ್ಯಮ ಪ್ರತಿನಿಧಿಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ. ಮಾಧ್ಯಮ ಇಂದು ವ್ಯಾಪಕ ಬದಲಾವಣೆ ಕಾಣುತ್ತಿದ್ದರೂ ಯೂಟ್ಯೂಬ್, ಡಿಜಿಟಲ್ ಮೀಡಿಯಾ ವಲಯ ಮಾಧ್ಯಮ ಕ್ಷೇತ್ರವನ್ನು ಕಲುಷಿತಗೊಳಿಸುತ್ತಿದೆ. ಪ್ರತಿಯೊಂದು ಕಾರ್ಯಕ್ರಮದಲ್ಲಿ 500 ರಿಂದ 1000 ರೂಪಾಯಿ ದೈನಂದಿನ ವಸೂಲಿ ಇವರ ಆದ್ಯತೆಯಾಗಿದ್ದು, ಮಾಧ್ಯಮ ಕ್ಷೇತ್ರ ಎಲ್ಲಿಗೆ ತಲುಪಲಿದೆ ಎಂಬ ಆತಂಕವಿದೆ'' ಎಂದು ಹೇಳಿದರು.

ಹಿರಿಯ ಪತ್ರಕರ್ತ ಆರ್.ಪಿ. ಜಗದೀಶ್ ಅವರು ಹೊನಕೆರೆ ನಂಜುಂಡೇಗೌಡ ಅವರ ಒಡನಾಟ ಸ್ಮರಿಸಿಕೊಂಡರೆ, ಹಿರಿಯ ವಕೀಲ ಬಿ.ಟಿ. ವೆಂಕಟೇಶ್ ಮಾಧ್ಯಮ ದಿಗ್ಗಜರೊಂದಿಗಿನ ಬಾಂಧವ್ಯವನ್ನು ನೆನಪು ಮಾಡಿಕೊಂಡರು. ಪ್ರಶಸ್ತಿಗೆ ಭಾಜರಾದ ಹೊನಕೆರೆ ನಂಜುಂಡೇಗೌಡ ತಮ್ಮನ್ನು ಪತ್ರಿಕೋದ್ಯಮದ ಆರಂಭದಿಂದ ಮುನ್ನಡೆಸಿದ ಪ್ರತಿಯೊಬ್ಬರಿಗೂ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು. ಸ್ಮಿತಾ ಅಚ್ಯುತನ್, ಖಾದ್ರಿ ಶಾಮಣ್ಣ ಟ್ರಸ್ಟ್ ನ ಮುಖ್ಯಸ್ಥ ಎಚ್.ಆರ್. ಶ್ರೀಶಾ, ಪತ್ರಕರ್ತ ವಿ. ನಂಜುಂಡಪ್ಪ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಬರ ಪರಿಹಾರ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ಅನುಭವದ ಕೊರತೆ: ನಳಿನ್ ಕುಮಾರ್ ಕಟೀಲ್

ABOUT THE AUTHOR

...view details