ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಕೆಎಸ್ಆರ್‌ಟಿಸಿ ಉಚಿತ ಬಸ್ ಪ್ರಯಾಣ ಕಲ್ಪಿಸಿದೆ. 31-03-2023 ರಿಂದ 15-04-2023 ರವರೆಗೆ ನಡೆಯಲಿರುವ ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ತೋರಿಸಿ, ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ತೆರಳಲು ಮತ್ತು ವಾಪಸ್ ಮರಳಲು ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರು ಮನವಿ ಮಾಡಿದ್ದರು. 2022-23ನೇ ಸಾಲಿನಲ್ಲಿ ಪರೀಕ್ಷೆ ನಡೆಯುವ ದಿನಾಂಕಗಳ ಪರೀಕ್ಷಾ ಅವಧಿಯಲ್ಲಿ ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಹಾಗೂ ವಾಸಸ್ಥಳಕ್ಕೆ ಮರಳಲು ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಉಚಿತ ಪ್ರಯಾಣ ಅನುಮತಿಸಲು ನಿಗಮದ ಎಲ್ಲಾ ಚಾಲಕ / ನಿರ್ವಾಹಕರುಗಳಿಗೆ ಸೂಕ್ತ ತಿಳುವಳಿಕೆ ನೀಡಲು ಸೂಚಿಸಲಾಗಿದೆ. ಜೊತೆಗೆ, ಪ್ರವೇಶ ಪತ್ರದ ಆಧಾರದ ಮೇಲೆ ಬಸ್ಸು ಸಂಚರಿಸುವ ಮಾರ್ಗದಲ್ಲಿ ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಿದ್ಯಾರ್ಥಿಗಳು ಬಸ್ಸನ್ನು ಹತ್ತುವವರಿದ್ದಲ್ಲಿ ಹಾಗೂ ಸಂಚರಿಸುವ ಮಾರ್ಗದಲ್ಲಿ ಪರೀಕ್ಷಾ ಕೇಂದ್ರಗಳಿದ್ದಲ್ಲಿ, ವಿದ್ಯಾರ್ಥಿಗಳು ಬಸ್ಸು ಹತ್ತಲು / ಇಳಿಯಲು ಅನುಕೂಲವಾಗುವಂತೆ ಕೋರಿಕೆ ನಿಲುಗಡೆ ನೀಡಲು ಚಾಲನಾ ಸಿಬ್ಬಂದಿಗೆ ಸೂಚನೆ ನೀಡಲು ತೀರ್ಮಾನಿಸಲಾಗಿದೆ.
ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್: ಕೆಂಪೇಗೌಡ ಬಸ್ ನಿಲ್ದಾಣದಿಂದ ಚಿಕ್ಕಬಳ್ಳಾಪುರ ಬಸ್ ನಿಲ್ದಾಣಕ್ಕೆ ಮಾರ್ಗಸಂಖ್ಯೆ V-298MN ಹವಾನಿಯಂತ್ರಿತ ಸಾರಿಗೆಗಳ ಪ್ರಾಯೋಗಿಕ ಕಾರ್ಯಾಚರಣೆ ಮಂಗಳವಾರದಿಂದ ಆರಂಭವಾಗಿದೆ. ಚಿಕ್ಕಬಳ್ಳಾಪುರ ಸುತ್ತಮುತ್ತಲಿನ ಪಯಾಣಿಕರ ಹೆಚ್ಚಿನ ಅನುಕೂಲಕ್ಕಾಗಿ, ಕಂಪೇಗೌಡ ಬಸ್ ನಿಲ್ದಾಣದಿಂದ ಹೆಬ್ಬಾಳ, ಯಲಹಂಕ, ರಾಣಿ ಕ್ರಾಸ್/ದೇವನಹಳ್ಳಿ ಮಾರ್ಗವಾಗಿ ಚಿಕ್ಕಬಳ್ಳಾಪುರ ಬಸ್ ನಿಲ್ದಾಣಕ್ಕೆ ನೂತನವಾಗಿ ಮಾರ್ಗಸಂಖ್ಯೆV-298MN ಹವಾನಿಯಂತ್ರಿತ ಸಾರಿಗೆಗಳ ಪ್ರಾಯೋಗಿಕ ಕಾರ್ಯಾಚರಣೆ ಆರಂಭವಾಗಿದೆ.
ಚಿಕ್ಕಬಳ್ಳಾಪುರ ಸಿವಿಲ್ ಬಸ್ ನಿಲ್ದಾಣದಲ್ಲಿ ಸಚಿವ ಡಾ.ಕೆ.ಸುಧಾಕರ್, ನೂತನ ಮಾರ್ಗದ ಎರಡು ಬಸ್ಸುಗಳಿಗೆ ಹಸಿರು ನಿಶಾನೆ ತೋರಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧ್ಯಕ್ಷ ಎನ್.ಎಸ್.ನಂದೀಶ್ ಸೇರಿ ನಿಗಮದ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಮೂಲಕ ಚಿಕ್ಕಬಳ್ಳಾಪುರ ಜನತೆಗೆ ಯುಗಾದಿ ಗಿಫ್ಟ್ ನೀಡಲಾಗಿದೆ.