ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ, ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 1.55 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿಸಿಗಳನ್ನು ನೀಡಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್ ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ನಿಮಿತ್ತ ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ಏರ್ಪಡಿಸಲಾಗಿದ್ದ ʼಉತ್ತಮ ಆಡಳಿತ ದಿನʼ (ಗುಡ್ ಗವರ್ನೆನ್ಸ್ ಡೇ) ಕಾರ್ಯಕ್ರಮದಲ್ಲಿ ʼಉನ್ನತ ಶಿಕ್ಷಣದಲ್ಲಿ ಜಾಗತಿಕ ಮಟ್ಟದ ಸಿದ್ಧತೆʼ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಡಿಜಿಟಲ್ ಕಲಿಕೆಯನ್ನು ವ್ಯಾಪಕವಾಗಿ ಉತ್ತೇಜಿಸುವ ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಾದ ಗುಣಮಟ್ಟದ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಗೋಷ್ಠಿಯನ್ನು ನಡೆಸಿಕೊಟ್ಟ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಜಮದಗ್ನಿ ಅವರ ಪ್ರಶ್ನೆಗೆ ಉತ್ತರಿಸಿದ ಪ್ರದೀಪ್, ಸದ್ಯಕ್ಕೆ ಕೋವಿಡ್ ಕಾರಣಕ್ಕೆ ಆನ್ಲೈನ್ ಶಿಕ್ಷಣ ನಡೆಯುತ್ತಿದೆ. ಇದು ತಾತ್ಕಾಲಿಕ ವ್ಯವಸ್ಥೆ ಮಾತ್ರ. ಕಾಲೇಜುಗಳು ಆರಂಭವಾಗಿಯೇ ಆಗುತ್ತವೆ. ನೇರ ತರಗತಿಗಳೂ ನಡೆಯುತ್ತವೆ. ಆದರೆ, ತಾಂತ್ರಿಕವಾಗಿ ನಮ್ಮ ವಿದ್ಯಾರ್ಥಿಗಳನ್ನು ಜಾಗತಿಕ ಗುಣಮಟ್ಟಕ್ಕೆ ಅಣಿಗೊಳಿಸಲು ಎಲ್ಲ ರೀತಿಯ ಆರ್ಥಿಕ ಸಹಕಾರ ನೀಡಲು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಉದ್ದೇಶಿಸಿದ್ದಾರೆ ಎಂದರು.
ಪ್ರಸಕ್ತ 2020-21ರ ಶೈಕ್ಷಣಿಕ ವರ್ಷದಲ್ಲಿ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಥಮ ವರ್ಷದ ವಿದ್ಯಾರ್ಥಿಗಳು, 14 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಪ್ರಥಮ, ದ್ವಿತೀಯ, ತೃತೀಯ ವರ್ಷದ ವಿದ್ಯಾರ್ಥಿಗಳು ಹಾಗೂ 87 ಸರ್ಕಾರಿ ಪಾಲಿಟೆಕ್ನಿಕ್ಗಳಲ್ಲಿ ಓದುತ್ತಿರುವ ಪ್ರಥಮ, ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಈ ಟ್ಯಾಬ್ಲೆಟ್ಗಳನ್ನು ನೀಡಲಾಗುತ್ತಿದೆ ಎಂದರು.