ಬೆಂಗಳೂರು: ರಾಜ್ಯದ ಕೆಲವು ಸರ್ಕಾರಿ ಆಸ್ಪತ್ರೆಗಳು ಹೆಚ್‌ಐವಿ ರೋಗಿಗಳ ವೈದ್ಯಕೀಯ ಪರೀಕ್ಷೆಯು ಉಚಿತವಾಗಿದ್ದರೂ ಶುಲ್ಕ ವಿಧಿಸುತ್ತಿರುವುದು ವರದಿಯಾಗುತ್ತಿದೆ. ಹೀಗಾಗಿ ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ಹೆಚ್‌ಐವಿ ರೋಗಿಗಳಿಗೆ ಅಗತ್ಯವಿರುವ ಎಲ್ಲಾ ಪರೀಕ್ಷೆಗಳನ್ನು ಉಚಿತವಾಗಿ ನಡೆಸಬೇಕು ಎಂದು ಸರ್ಕಾರಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಐವಿ ರೋಗಿಗಳ ವೈದ್ಯಕೀಯ ಪರೀಕ್ಷೆ ಉಚಿತ : ಶುಲ್ಕ ವಿಧಿಸಿದರೆ ಕಠಿಣ ಕ್ರಮ
ಎ.ಆರ್.ಟಿ, ಕೇಂದ್ರದ ನೋಂದಾಯಿತ ಹೆಚ್.ಐ.ವಿ. ಸೋಂಕಿತರಿಗೆ ಎಲ್ಲಾ ತರಹದ ಪ್ರಯೋಗ, ಮತ್ತಿತರ ಪರೀಕ್ಷೆಗಳನ್ನು ಉಚಿತವಾಗಿ ಮಾಡುವಂತೆ ಆರೋಗ್ಯ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.
ಈ ಕುರಿತು ಆದೇಶವನ್ನೂ ಸಹ ಆರೋಗ್ಯ ಇಲಾಖೆ ಹೊರಡಿಸಿದ್ದು, ಎ.ಆರ್.ಟಿ, ಕೇಂದ್ರದ ನೋಂದಾಯಿತ ಹೆಚ್.ಐ.ವಿ. ಸೋಂಕಿತರಿಗೆ ಎಲ್ಲಾ ತರಹದ ಪ್ರಯೋಗ, ಮತ್ತಿತರ ಪರೀಕ್ಷೆಗಳನ್ನು ಉಚಿತವಾಗಿ ಮಾಡುವಂತೆ ಸುತ್ತೋಲೆ ಹೊರಡಿಸಲಾಗಿದೆ. ಈಗಾಗಲೇ ಉಚಿತವಾಗಿ ನಡೆಸಲು ಸೂಚನೆ ನೀಡಿದ್ದರೂ ಸಹ ಕೆಲವು ಆಸ್ಪತ್ರೆಗಳಲ್ಲಿ ಹೆಚ್.ಐ.ವಿ ಸೋಂಕಿತರಿಂದ ಪ್ರಯೋಗ ಶಾಲಾ ಪರೀಕ್ಷೆ ಹಾಗೂ ಇತರ ಪರೀಕ್ಷೆಗಳಿಗೆ ಶುಲ್ಕವನ್ನು ವಿಧಿಸುತ್ತಿರುವುದು ಕರ್ನಾಟಕ ರಾಜ್ಯ ಏಡ್ಸ್ ವಿಷನ್ ಸೊಸೈಟಿಗೆ ದೂರುಗಳು ಬಂದಿವೆ.
ಬಹುತೇಕ ಸೋಂಕಿತರು ಆರ್ಥಿಕವಾಗಿ ಹಿಂದುಳಿದಿದ್ದು ಮತ್ತು ಬಡತನದ ಹಿನ್ನೆಲೆಯುಳ್ಳವರಾಗಿದ್ದಾರೆ. ಇವರು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಎ.ಆರ್.ಟಿ. ಕೇಂದ್ರದಲ್ಲಿ ನೋಂದಾಯಿತರಾಗಿ ಎಆರ್‌ಟಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್.ಐ.ವಿ. ಸೋಂಕಿತರು ಸಮಯ ಸಾಧಕ ಸೋಂಕುಗಳಿಗೆ ಒಳಪಡುವ ಸಂದರ್ಭಗಳಲ್ಲಿ ಬೇಕಾಗುವ ಲ್ಯಾಬ್ ಪರೀಕ್ಷೆ, ಎಕ್ಸರೇ, ಅಲ್ಟ್ರಾ ಸೌಂಡ್ ಇತರೆ ಪರೀಕ್ಷೆಗಳು ಮತ್ತು ಎ.ಆರ್.ಟಿ, ಚಿಕಿತ್ಸೆಗೆ ಒಳಪಡುವ ಮುನ್ನ ಪೂರ್ವಭಾವಿ ಪರೀಕ್ಷೆಗಳನ್ನು ಆದ್ಯತೆ ಮೇಲೆ ಕಡ್ಡಾಯವಾಗಿ ಹಾಗೂ ಉಚಿತವಾಗಿ ಮಾಡಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.