ಬೆಂಗಳೂರು: ರಾಜ್ಯ ಸರ್ಕಾರ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆ ಪೌರಾಡಳಿತ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹದಿನಾಲ್ಕು ದಿನಗಳ ಕಾಲ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಆಹಾರ ವಿತರಿಸಲು ತೀರ್ಮಾನಿಸಿದೆ.
ಲಾಕ್ಡೌನ್ ಅವಧಿಯಲ್ಲಿ ಕೂಲಿ ಕಾರ್ಮಿಕರು, ವಲಸಿಗರು ಮತ್ತು ಇತರ ದುರ್ಬಲ ವರ್ಗದವರಿಗೆ ಅನಾನುಕೂಲವಾಗದಂತೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚಾಲ್ತಿಯಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತವಾಗಿ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.
ಬಿಬಿಎಂಪಿ ಹೊರತುಪಡಿಸಿ ಸ್ಥಳೀಯ ಸಂಸ್ಥೆಗಳಲ್ಲಿ ಚಾಲನೆಯಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಅನುಮತಿ ಪಡೆದು ಯೋಜನೆ ಘೋಷಣೆ ಮಾಡಲಾಗಿದೆ. ಯಾರೂ ಹಸಿವಿನಿಂದ ಬಳಲಬಾರದೆಂಬುವುದು ಈ ಯೋಜನೆಯ ಉದ್ದೇಶ. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.