ಬೆಂಗಳೂರು:ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ಉಚಿತವಾಗಿ ವಿದ್ಯುತ್ ಹಾಗು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಓದಬೇಕು, ಕನಿಷ್ಠ ಎಸ್ಎಸ್ಎಲ್ಸಿವರೆಗಾದರೂ ಕನ್ನಡ ಮಾಧ್ಯಮದಲ್ಲಿ ಓದಬೇಕು ಎಂದು ಕರೆ ನೀಡಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿಂದು ಶಿಕ್ಷಣ ಇಲಾಖೆ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ, ರಾಜ್ಯ ಏಕೀಕರಣವಾದಾಗ ಮೈಸೂರು ರಾಜ್ಯ ಎಂದು ಕರೆಯಲಾಯಿತು. 1973 ರಲ್ಲಿ ಅಂದಿನ ಸಿಎಂ ದೇವರಾಜ ಅರಸು ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣ ಮಾಡಿದರು. ಮರುನಾಮಕರಣಕ್ಕೆ 50 ವರ್ಷ ತುಂಬಿದೆ. ಇಡೀ ರಾಜ್ಯದಲ್ಲಿ ಒಂದು ವರ್ಷ ಕರ್ನಾಟಕ ಸಂಭ್ರಮ 50 ಹೆಸರಿನ ಮೂಲಕ ಕನ್ನಡದ ಇತಿಹಾಸ, ಸಂಸ್ಕೃತಿ, ಭಾಷೆ, ಕಲೆ, ಸಂಗೀತ, ಜನಪದ, ಸಂಪ್ರದಾಯವನ್ನು ರಾಜ್ಯದ ಉದ್ದಗಲಕ್ಕೆ ತಿಳಿಸುವ ಕೆಲಸ ಮಾಡಲಿದ್ದೇವೆ. ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎನ್ನುವ ಘೋಷವಾಕ್ಯದೊಂದಿಗೆ ಇಡೀ ರಾಜ್ಯದಲ್ಲಿ ನಾವು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಈ ವರ್ಷಕ್ಕೆ 50 ವರ್ಷದ ಕಾರ್ಯಕ್ರಮ ಮಾಡಬೇಕಿತ್ತು. ಆದರೆ ಹಿಂದಿನ ಸರ್ಕಾರ ಅದನ್ನು ಮಾಡಲಿಲ್ಲ. ಹಾಗಾಗಿ ನಾನು ಈ ವರ್ಷ ಸಂಭ್ರಮಾಚರಣೆಗೆ ಬಜೆಟ್ನಲ್ಲಿ ಘೋಷಣೆ ಮಾಡಿದ್ದು, ಮುಂದಿನ ಒಂದು ವರ್ಷ ಈ ಕಾರ್ಯಕ್ರಮ ನಡೆಯಲಿದೆ. ಜನರನ್ನು ಜಾಗೃತಿ ಮಾಡುವ ಕೆಲಸ ಮಾಡಲಿದ್ದೇವೆ ಎಂದು ಸಿಎಂ ತಿಳಿಸಿದರು.
ನಾವೆಲ್ಲ ಕನ್ನಡ ಭಾಷೆಯಲ್ಲೇ ವ್ಯವಹಾರ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದೇವೆ. ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ವ್ಯವಹರಿಸಲ್ಲ ಎನ್ನುವ ಪ್ರತಿಜ್ಞೆ ಮಾಡಬೇಕು. ನಮ್ಮ ಭಾಷೆ, ನೆಲ, ಜಲ ಸಂಸ್ಕೃತಿ, ಕಲೆಗಳ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದು ಅತಿ ಅವಶ್ಯಕ. ಕನ್ನಡ ಭಾಷೆ ನಮ್ಮ ತಾಯಿ ಭಾಷೆ, ಈ ನೆಲದ ಋಣ ತೀರಿಸಬೇಕಾದಲ್ಲಿ ನೆಲ, ಜಲ, ಭಾಷೆ ಸಂಸ್ಕೃತಿ ಎತ್ತಿ ಹಿಡಿಯುವ ಪ್ರತಿಜ್ಞೆಯನ್ನು ಎಲ್ಲ ಕನ್ನಡಿಗರು ಮಾಡಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ನಮ್ಮನ್ನು ಅಭಿಮಾನ್ಯ ಶೂನ್ಯರು ಎನ್ನಲು ಹೋಗಲ್ಲ. ಆದರೆ ನಮಗೆ ಬೇರೆ ರಾಜ್ಯಗಳ ಜನರಂತೆ ಅಭಿಮಾನ ಇಲ್ಲದೇ ಇದ್ದರೂ ಅಷ್ಟೊಂದು ಧಾರಾಳತನ ಇರಬಾರದು. ಇಲ್ಲಿಗೆ ಬರುವ ಹೊರ ರಾಜ್ಯದವರು ಕನ್ನಡ ಕಲಿಯಬೇಕು. ಆ ವಾತಾವರಣ ನಿರ್ಮಾಣ ಮಾಡಬೇಕು. ಆಗ ಮಾತ್ರ ಅಧಿಕೃತ ಭಾಷೆ ಮಾತನಾಡಲು ಸಾಧ್ಯವಾಗಲಿದೆ. ತಮಿಳುನಾಡಿನಲ್ಲಿ ತಮಿಳು ಮಾತನಾಡದೆ ಬದುಕಲು ಸಾಧ್ಯವಿಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡ ಮಾತಾಡದೆಯೇ ಇಡೀ ಬದುಕನ್ನು ನಡೆಸುವ ಪರಿಸ್ಥಿತಿ ಇದೆ. ಯಾವ ಭಾಷೆಯನ್ನೂ ಕಲಿಯಬೇಡಿ ಎನ್ನಲ್ಲ. ಯಾವ ಭಾಷೆ ಬೇಕಾದರೂ ಕಲಿಯಿರಿ. ಆದರೆ ಕನ್ನಡ ಮಾತನಾಡಿ, ಕನ್ನಡ ನಮ್ಮ ಸಾರ್ವಭೌಮ ಭಾಷೆ. ಆಡಳಿತ ಭಾಷೆಯಾಗಿ ಕನ್ನಡ ಎಂದು ಘೋಷಣೆ ಮಾಡಿದ್ದೇವೆ. ಕನ್ನಡದ ಆಡಳಿತ ವ್ಯವಹಾರ ಕನ್ನಡದಲ್ಲೇ ಆಗುತ್ತಿದೆ.
ನಮ್ಮ ಆಡಳಿತ ಪರಿಣಾಮಕಾರಿಯಾಗಿ ಜನರನ್ನು ತಲುಪಲು ಕನ್ನಡ ಭಾಷೆಯಲ್ಲಿ ವ್ಯವಹಾರ ಆದಾಗ ಮಾತ್ರ ಸಾಧ್ಯ. ಹಾಗಾಗಿ ಪ್ರತಿಯೊಬ್ಬ ಅಧಿಕಾರಿ, ರಾಜಕಾರಣಿ ಕನ್ನಡದಲ್ಲೇ ವ್ಯವಹರಿಸಬೇಕು. ಬರೀ ಘೋಷಣೆ ಮಾಡಿದರೆ ಸಾಲದು. ಕನ್ನಡ ನಮ್ಮ ಮಾತೃಭಾಷೆ. ನೆಲದ ಭಾಷೆ. ಕೇಂದ್ರ ಸರ್ಕಾರ ಇಂದೂ ಕೂಡ ಹಿಂದಿ, ಇಂಗ್ಲಿಷ್ನಲ್ಲಿ ಕೇಂದ್ರದ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಸುತ್ತಿದೆ. ಇದಕ್ಕೆ ವಿರೋಧ ಮಾಡಬೇಕು. ಈ ಬಗ್ಗೆ ಪಿಎಂಗೆ ಪತ್ರ ಬರೆಯುತ್ತೇನೆ. ಮಕ್ಕಳಿಗೆ ಗೊತ್ತಿರುವ ಭಾಷೆಯಲ್ಲಿ ಪರೀಕ್ಷೆ ಮಾಡಬೇಕಿದೆ ಎಂದರು.
ಸರ್ಕಾರಿ ಶಾಲೆಗೆ ಬರುವ ವಿದ್ಯಾರ್ಥಿಗಳ ತಪ್ಪಿಸಿ ಖಾಸಗಿ ಶಾಲೆಗೆ ಇಂಗ್ಲೀಷ್ ಮಾಧ್ಯಮಕ್ಕೆ ಸೇರಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ. ಇಂಗ್ಲೀಷ್ ಮಾಧ್ಯಮದಲ್ಲಿ ಓದಿದರೆ ಮೇಧಾವಿ ಆಗಲಿದ್ದೇವೆ. ಉದ್ಯೋಗ ಸಿಗಲಿದೆ ಎನ್ನುವುದು ಸರಿಯಾದ ತಿಳುವಳಿಕೆ ಅಲ್ಲ. ನಮ್ಮ ರಾಜ್ಯದ ಅನೇಕ ವಿಜ್ಞಾನಿಗಳು ಕನ್ನಡದಲ್ಲೇ ಓದಿ ವಿಖ್ಯಾತರಾಗಿದ್ದಾರೆ. ಹಾಗಾಗಿ ಇಂಗ್ಲೀಷ್ ಮಾಧ್ಯಮದಲ್ಲೇ ಓದಬೇಕು ಎನ್ನುವುದು ತಪ್ಪು ಕಲ್ಪನೆ ಎಂದರು. ಕನ್ನಡ ಮಾಧ್ಯಮದ ನಮ್ಮ ಕಲ್ಪನೆಗೆ ಕೋರ್ಟ್ ಸಹಕಾರ ಕೊಡುತ್ತಿಲ್ಲ. ಮಕ್ಕಳು ಯಾವ ಮಾಧ್ಯಮದಲ್ಲಿ ಓದಬೇಕು ಎಂದು ಪೋಷಕರ ಇಚ್ಛೆಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಹಾಗಾಗಿ ಕನ್ನಡ ಮಾಧ್ಯಮದ ನಮ್ಮ ಆಶಯ ಈಡೇರಿಲ್ಲ. ಇದರ ಬದಲಾವಣೆಗೆ ಯತ್ನಿಸುತ್ತೇವೆ ಎಂದರು.