ಬೆಂಗಳೂರು: ಶಕ್ತಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮೊದಲು ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಅಪಪ್ರಚಾರ ಮಾಡಿದರು. ಈಗ ಈ ಯೋಜನೆಗಳು ಹೆಚ್ಚು ಕಾಲ ಚಾಲನೆಯಲ್ಲಿ ಇರುವುದಿಲ್ಲ ಎಂದು ಅಪಪ್ರಚಾರ ಆರಂಭಿಸಿದ್ದಾರೆ. ಇಂಥ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ, ನಮ್ಮದು ನುಡಿದಂತೆ ನಡೆಯುತ್ತಿರುವ ಸರ್ಕಾರ. ಇದಕ್ಕೆ ನಾನೇ ಗ್ಯಾರಂಟಿ ಎಂದು ಭರವಸೆ ನೀಡಿದ್ದಾರೆ.
ಶಕ್ತಿ ಯೋಜನೆ ಸ್ಥಗಿತವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇತ್ತ ವಿದ್ಯಾರ್ಥಿನಿಯರು ಬಸ್ ಪಾಸ್ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಸಿಎಂ, ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ಸ್ಥಗಿತವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಾರಿಗೆ ಸಚಿವರೂ ಈ ಬಗ್ಗೆ ಸ್ಪಷ್ಟನೆ ನೀಡಿ, ಶಕ್ತಿ ಯೋಜನೆ ನಿಲ್ಲಿಸುವ ಬಗ್ಗೆ ಊಹಾಪೋಹ ಹರಿದಾಡುತ್ತಿದೆ. ಇದನ್ನು ಒಂದು ಪಕ್ಷದವರು ಮಾಡಿಸುತ್ತಿದ್ದಾರೆ. ಇನ್ನೂ 10 ವರ್ಷ ಶಕ್ತಿ ಯೋಜನೆ ಮುಂದುವರಿಯುತ್ತದೆ. ಯಾರೂ ಕೂಡ ಪಾಸ್ ಪಡೆಯುವ ಅಗತ್ಯ ಇಲ್ಲ. ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. 10 ವರ್ಷವೂ ಈ ಯೋಜನೆ ಮುಂದುವರೆಯಲಿದೆ. ಹೆಣ್ಣು ಮಕ್ಕಳು ಬಸ್ ಪಾಸ್ ಮಾಡಿಸಿಕೊಳ್ಳುವ ಅಗತ್ಯ ಇಲ್ಲ. ಪ್ರತಿಪಕ್ಷಗಳು ಅಪಪ್ರಚಾರ ಮಾಡುತ್ತಿದ್ದಾರೆ. ಯಾರಿಗೂ ಭಯ ಬೇಡ, ಗಾಬರಿ ಬೇಡ ಎಂದು ತಿಳಿಸಿದ್ದರು.
ಕೆಎಸ್ಆರ್ಟಿಸಿ ಕೂಡಾ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆ ಕೊನೆಗೊಳ್ಳಲಿದ್ದು, ಮಹಿಳೆಯರಿಗೆ ಒದಗಿಸುತ್ತಿರುವ ಉಚಿತ ಪ್ರಯಾಣ ಶೀಘ್ರದಲ್ಲಿಯೇ ಸ್ಥಗಿತಗೊಳ್ಳಲಿದೆ ಎಂಬುದಾಗಿ ಸುದ್ದಿಯನ್ನು ಪ್ರಕಟಿಸುತ್ತಿರುವುದು ಸತ್ಯಕ್ಕೆ ದೂರವಾದ ವಿಷಯ. ಈ ರೀತಿಯ ಯಾವುದೇ ಗೊಂದಲದ ಸಂದೇಶಗಳನ್ನು ಸಾರ್ವಜನಿಕ ಪ್ರಯಾಣಿಕರು ನಂಬಬಾರದು. ನಾವು ಸಾರ್ವಜನಿಕರಿಗೆ ಕಾಲಕಾಲಕ್ಕೆ ಸಮರ್ಪಕವಾದ ಮಾಹಿತಿ ಒದಗಿಸುತ್ತೇವೆ. ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯು ಎಂದಿನಂತೆ ಮುಂದುವರೆಯಲಿದೆ ಎಂದು ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ:ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಿರಿ: ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಡಿಸಿಎಂ ಡಿಕೆಶಿ ಕರೆ
ಪ್ರತಿದಿನ ಶೇ.1ರಷ್ಟು ಶಕ್ತಿ ಯೋಜನೆ ದುರ್ಬಳಕೆ:ಇತ್ತೀಚಿಗೆ, ಪ್ರತಿ ದಿನ ಶೇ.1 ರಷ್ಟು ಶಕ್ತಿ ಯೋಜನೆ ದುರ್ಬಳಕೆ ಆಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದರು. ಶಾಂತಿನಗರ ಬಿಎಂಟಿಸಿ ಕಚೇರಿಯಲ್ಲಿ ಮಾತನಾಡಿದ್ದ ಅವರು, "ಪ್ರತಿನಿತ್ಯ 1 ಕೋಟಿ 39 ಲಕ್ಷ ಪ್ರಯಾಣಿಕರು ಓಡಾಟ ಮಾಡ್ತಿದ್ದಾರೆ. ಇದರಲ್ಲಿ ಶೇ.1 ರಷ್ಟು ಮಿಸ್‌ಯೂಸ್ ಆಗ್ತಿದೆ" ಎಂದು ತಿಳಿಸಿದ್ದರು. "749.30 ಕೋಟಿ ರೂ ಮೌಲ್ಯದ ಟಿಕೆಟ್ ನೀಡಲಾಗಿದೆ. ಪ್ರತಿನಿತ್ಯ ಸರಾಸರಿ 59.55 ಲಕ್ಷ ಮಹಿಳಾ ಪ್ರಯಾಣಿಕರು ಓಡಾಡಿದ್ದಾರೆ. ಶಕ್ತಿ ಜಾರಿ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಯೋಜನೆ ಜಾರಿಗೂ ಮೊದಲು 84.91 ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ ಯೋಜನೆ ಜಾರಿಯಾದ ಬಳಿಕ 109.95 ಲಕ್ಷಕ್ಕೆ ಏರಿಕೆಯಾಗಿದೆ" ಎಂದಿದ್ದರು.