ಕರ್ನಾಟಕ

karnataka

ETV Bharat / state

ಶ್ರಮಿಕ ವರ್ಗಕ್ಕೆ ಕೊಟ್ಟಿದ್ದ ಉಚಿತ ಬಸ್ ಪಾಸ್ ಸ್ಥಗಿತ: ಹೊಸ ಸರ್ಕಾರದ ಗ್ಯಾರಂಟಿಗಳ ಜಾರಿಗೆ ಕಾದು ಕುಳಿತ ಕಾರ್ಮಿಕರು - ಉಚಿತ ಬಸ್ ಪಾಸ್ ಅವಧಿ

ಕಾರ್ಮಿಕ ಇಲಾಖೆಯಿಂದ ಯಾವುದೇ ನಿರ್ದೇಶನ ಬಾರದ ಹಿನ್ನೆಲೆ ಬಿಎಂಟಿಸಿ ಅಧಿಕಾರಿಗಳು ಉಚಿತ ಬಸ್​ ಪಾಸ್​ ನೀಡುವುದನ್ನು ಸದ್ಯಕ್ಕೆ ಸ್ಥಗಿತಗೊಳಿಸಿದ್ದಾರೆ.

Free bus pass given to working class discontinued
ಶ್ರಮಿಕ ವರ್ಗಕ್ಕೆ ಕೊಟ್ಟಿದ್ದ ಉಚಿತ ಬಸ್ ಪಾಸ್ ಸ್ಥಗಿತ

By

Published : May 19, 2023, 7:33 PM IST

ಬೆಂಗಳೂರು: ಶ್ರಮಿಕ ವರ್ಗದ ಸುರಕ್ಷಿತ ಓಡಾಟಕ್ಕೆ ಘೋಷಿಸಿದ್ದ ಉಚಿತ ಬಸ್ ಪಾಸ್ ಅವಧಿ ಮಾರ್ಚ್ 31ಕ್ಕೇ ಅಂತ್ಯಗೊಂಡಿದ್ದು, ಈ ಹಿನ್ನೆಲೆಯಲ್ಲಿ ನೂರಾರು ಪ್ಲಂಬರ್​ಗಳು, ಬಡಗಿಗಳು, ಕಟ್ಟಡ ನಿರ್ಮಾಣ ಕಾರ್ಮಿಕರು ಹೊಸ ಸರ್ಕಾರದ ಗ್ಯಾರಂಟಿಗಳ ಜಾರಿಗಾಗಿ ಕಾದು ಕುಳಿತುಕೊಳ್ಳುವಂತಾಗಿದೆ. ಪಾಸ್​ಗಳ ಅವಧಿ ಮಾರ್ಚ್ 31ಕ್ಕೆ ಮುಗಿದಿದ್ದರೂ, ಅವು ನವೀಕರಿಸಲಾಗಿಲ್ಲ. ಪಾಸ್​ಗಳ ಅವಧಿ ವಿಸ್ತರಿಸಿದ್ದೇ ಆದರೆ, ಸ್ವಲ್ಪ ಪ್ರಮಾಣದ ಹಣವನ್ನು ಉಳಿಸಲು ಸಹಾಯವಾಗುತ್ತದೆ ಎಂದು ಕಾರ್ಮಿಕರು ಹೇಳಿದ್ದಾರೆ.

ಪ್ಲಂಬರ್ ಆಗಿ ಕೆಲಸ ಮಾಡುತ್ತಿರುವ ಸಾರಕ್ಕಿಯ ನಿವಾಸಿ ಉಮೇಶ್ ಮಾತನಾಡಿ, ಕಾರ್ಮಿಕ ಇಲಾಖೆ ಮೂಲಕ ಹೆಸರು ನೋಂದಾಯಿಸಿಕೊಂಡ ಬಳಿಕ ಉಚಿತ ಬಿಎಂಟಿಸಿ ಪಾಸ್ ನೀಡಲಾಗಿತ್ತು. 2020ರ ಆಗಸ್ಟ್​ನಿಂದಲೂ ಪಾಸ್ ಬಳಕೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಮಾರ್ಚ್​ನಲ್ಲಿ ಪಾಸ್ ಅವಧಿ ಮುಗಿದಿದೆ. ನವೀಕರಣಕ್ಕೆ ಹೋದಾಗ ಉಚಿತ ಪಾಸ್ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಿಎಂಟಿಸಿಯಲ್ಲಿ ಉನ್ನತಾಧಿಕಾರಿಗಳ ಮೊರೆ ಹೋದರೆ ಕಾರ್ಮಿಕ ಇಲಾಖೆಯಿಂದ ಯಾವುದೇ ನಿರ್ದೇಶನ ಬಂದಿಲ್ಲ. ಹಲವು ನಕಲಿ ಕಾರ್ಮಿಕರು ಈ ಪಟ್ಟಿಯಲ್ಲಿದ್ದಾರೆ. ಇದೇ ಕಾರಣಕ್ಕೆ ಯೋಜನೆ ನಿಲ್ಲಿಸಲಾಗಿದೆ ಎನ್ನುತ್ತಿದ್ದಾರೆ. ಯೋಜನೆಯಲ್ಲಿ ನಕಲಿ ಫಲಾನುಭವಿಗಳನ್ನು ಕಿತ್ತು ಹಾಕುವ ಬದಲು ಉಚಿತ ಪಾಸ್ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದೀಗ ನನ್ನಂತಹ ಕಾರ್ಮಿಕರು ಪ್ರತಿದಿನ 50 ರೂ. ಗೂ ಹೆಚ್ಚು ಹಣವನ್ನು ಪ್ರಯಾಣಕ್ಕೆ ಖರ್ಚು ಮಾಡಬೇಕು ಎಂದು ಕಿಡಿಕಾರಿದ್ದಾರೆ. ಬಿಎಂಟಿಸಿ ಅಧಿಕಾರಿಗಳು ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಯಾವುದೇ ನಿರ್ದೇಶನಗಳು ಬಾರದ ಕಾರಣ ಉಚಿತ ಪಾಸ್​ಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.

ಚುನಾವಣೆಗೂ ಮುನ್ನ ಕಾಂಗ್ರೆಸ್​ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಐದು ಉಚಿತ ಗ್ಯಾರೆಂಟಿಯನ್ನು ಘೋಷಣೆ ಮಾಡಿದ್ದರು. ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2000 ರೂ ನೀಡುವ ಗೃಹಲಕ್ಷ್ಮಿ ಯೋಜನೆ, 200 ಯುನಿಟ್​ ವಿದ್ಯುತ್​ ಉಚಿತ, ಪದವೀಧರರಿಗೆ 3,000 ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ 1,500 ರೂ. ನೀಡುವ ಯುವನಿಧಿ ಯೋಜನೆ, ಬಿಪಿಎಲ್​ ಕಾರ್ಡ್​ದಾರರಿಗೆ 10 ಕೆಜಿ ಅಕ್ಕಿ ಅನ್ನಭಾಗ್ಯದ ಜೊತೆಗೆ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್​ ಪ್ರಯಾಣವನ್ನೂ ಘೋಷಣೆ ಮಾಡಿತ್ತು. ಆ ಉಚಿತ ಗ್ಯಾರೆಂಟಿಯಿಂದಾಗಿ ಕಾಂಗ್ರೆಸ್​ 135 ಸ್ಥಾನಗಳನ್ನು ಗೆದ್ದು ಭರ್ಜರಿಯಾಗಿ ಜಯವನ್ನೂ ಗಳಿಸಿತ್ತು. ಕಾಂಗ್ರೆಸ್​ ಗೆದ್ದ ಬೆನ್ನಲ್ಲೇ ಕೆಲವರು ಕಾಂಗ್ರೆಸ್​ ವಿದ್ಯುತ್​ ಉಚಿತ ಎಂದಿದೆ ಎಂದು ಹೇಳಿ ವಿದ್ಯುತ್​ ಬಿಲ್​ ಕಟ್ಟವುದಿಲ್ಲ ಎಂದು ಹೇಳಿದ ಘಟನೆಗಳೂ ನಡೆದಿವೆ.

ಒಟ್ಟಿನಲ್ಲಿ ಕಾಂಗ್ರೆಸ್​ನ ಉಚಿತ ಗ್ಯಾರೆಂಟಿಗಳ ಮೇಲೆ ಬೆಟ್ಟದಷ್ಟು ಭರವಸೆಯನ್ನು ಹೊತ್ತಿರುವ ಸಾಮಾನ್ಯ ಜನರು ಸರ್ಕಾರ ಅಧಿಕಾರಕ್ಕೆ ಬಂದು ಯೋಜನೆಗಳನ್ನು ಜಾರಿಗೊಳಿಸವುದನ್ನೇ ಎದುರು ನೋಡುತ್ತಿದ್ದಾರೆ. ಅವುಗಳ ಜೊತೆಗೆ ಈ ಶ್ರಮಿಕ ವರ್ಗದ ಉಚಿತ ಬಸ್​ ಪಾಸ್​ ವ್ಯವಸ್ಥೆಗೂ ಮರುಜೀವ ಸಿಗುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಕಾಂಗ್ರೆಸ್​ ಗೆಲ್ಲಿಸಿದ ಗ್ಯಾರಂಟಿ ಕಾರ್ಡ್​.. ಹೊಸ ಸರ್ಕಾರಕ್ಕೆ ಉಚಿತ ಯೋಜನೆಗಳ ಜಾರಿಗೆ ಎದುರಾಗಲಿದೆ ಹತ್ತಾರು ಸವಾಲು

ABOUT THE AUTHOR

...view details