ಬೆಂಗಳೂರು:ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರಿಗೆ 5 ಗ್ಯಾರಂಟಿಗಳನ್ನು ಘೋಷಿಸಿದ್ದ ಕಾಂಗ್ರೆಸ್ ಪಕ್ಷ ಬಳಿಕ ಅಧಿಕಾರದ ಗದ್ದುಗೆಯನ್ನೂ ಏರಿತು. ಈ ಗ್ಯಾರಂಟಿಗಳನ್ನು ಜಾರಿಗೆ ತರಲು ಇದೀಗ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವೂ ಒಂದು. ಈಗಾಗಲೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಉಚಿತ ಬಸ್ ಪ್ರಯಾಣ ಸೌಲಭ್ಯ ಎಲ್ಲ ಮಹಿಳೆಯರಿಗೆ ಯಾವುದೇ ಷರತ್ತು ಇಲ್ಲದೆ ದೊರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದು (ಬುಧವಾರ) ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿ ಉಚಿತಗಳ ಜಾರಿ ಸಂಬಂಧ ಚರ್ಚೆ ನಡೆಯಲಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅದಾಗಲೇ ನಷ್ಟದಲ್ಲಿರುವ ರಸ್ತೆ ಸಾರಿಗೆ ನಿಗಮಗಳಿಗೆ ಗಾಯದ ಮೇಲೆ ಬರೆ ಎಂಬುದರಲ್ಲಿ ಎರಡು ಮಾತಿಲ್ಲ. ನಾಲ್ಕು ರಸ್ತೆ ಸಾರಿಗೆ ನಿಗಮಗಳ ಮೇಲಿನ ಹೊರೆ ಇನ್ನಷ್ಟು ಹೆಚ್ಚಲಿದೆ.
3,600 ಕೋಟಿ ರೂ. ಹೆಚ್ಚುವರಿ ಹೊರೆ:ಉಚಿತ ಸರ್ಕಾರಿ ಬಸ್ ಪ್ರಯಾಣ ಯೋಜನೆಯಿಂದ ರಸ್ತೆ ಸಾರಿಗೆ ನಿಗಮಗಳ ಮೇಲೆ ವಾರ್ಷಿಕ ಒಟ್ಟು ಅಂದಾಜು 3,600 ಕೋಟಿ ರೂ. ಹೊರೆ ಬೀಳಲಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಯೋಜನೆ ಕೇವಲ ಸಾಮಾನ್ಯ ಸಾರಿಗೆ ಬಸ್ಗಳಿಗೆ ಮಾತ್ರ ಅನ್ವಯವಾಗಲಿದೆ. ಅದರಂತೆ 3,600 ಕೋಟಿ ರೂ. ಹೊರೆ ಬೀಳಲಿದೆ. ಈ ಸಂಬಂಧವೂ ಕೆಲ ನಿಬಂಧನೆಗಳನ್ನು ಹಾಕುವ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ನಾಲ್ಕು ರಸ್ತೆ ಸಾರಿಗೆ ನಿಗಮಗಳ ಒಟ್ಟು ಪ್ರಯಾಣಿಕರ ಸಂಖ್ಯೆ ಅಂದಾಜು 83 ಲಕ್ಷ ಇದೆ. ಈ ಪೈಕಿ 45-50% ಪ್ರಯಾಣಿಕರು ಮಹಿಳೆಯರು ಎಂದು ಅಂದಾಜಿಸಲಾಗಿದೆ.
ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿಗತಿ:ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿಗತಿ ಈಗಾಗಲೇ ಅಧೋಗತಿಗೆ ಹೋಗಿದೆ. ರಸ್ತೆ ಸಾರಿಗೆ ನಿಗಮಗಳ ಒಟ್ಟು ಪ್ರಯಾಣಿಕರ ಸಂಖ್ಯೆ ಅಂದಾಜು 83 ಲಕ್ಷ ಆಗಿದೆ. ಕೆಎಸ್ಆರ್ಟಿಸಿ ನಿತ್ಯ 9.79 ಕೋಟಿ ರೂ., ಎಂಟಿಸಿ ಸಂಸ್ಥೆ ನಿತ್ಯ 4.44 ಕೋಟಿ ರೂ. , ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿತ್ಯ 4.73 ಕೋಟಿ ರೂ., ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿತ್ಯ 4.16 ಕೋಟಿ ರೂ. ಸಾರಿಗೆ ಆದಾಯ ಗಳಿಸುತ್ತದೆ.