ಕರ್ನಾಟಕ

karnataka

ETV Bharat / state

Free Bus : ರಾಜ್ಯಾದ್ಯಂತ ಮೊದಲ ದಿನವೇ 5.71 ಲಕ್ಷ ಮಹಿಳಾ ಪ್ರಯಾಣಿಕರ ಸಂಚಾರ

ಉಚಿತ ಬಸ್​ ಪ್ರಯಾಣ ಸೌಲಭ್ಯದ ಲಾಭವನ್ನು ಸಾಕಷ್ಟು ಮಹಿಳೆಯರು ಪಡೆದುಕೊಂಡಿದ್ದಾರೆ.

ಶಕ್ತಿ ಯೋಜನೆ
ಶಕ್ತಿ ಯೋಜನೆ

By

Published : Jun 12, 2023, 6:35 PM IST

ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷೆ ಶಕ್ತಿ ಯೋಜನೆಗೆ ಮೊದಲ ದಿನವೇ ಮಹಿಳೆಯರಿಂದ ಭರ್ಜರಿ ಸ್ಪಂದನೆ ಸಿಕ್ಕಿದೆ. ಭಾನುವಾರ ವಿಧಾನಸೌಧದಲ್ಲಿ ಚಾಲನೆ ಸಿಕ್ಕ ಶಕ್ತಿ ಗ್ಯಾರಂಟಿ ಯೋಜನೆಯನ್ನು ರಾಜ್ಯದ ಮಹಿಳೆಯರು ಖುಷಿ ಖುಷಿಯಾಗಿ ಸ್ವೀಕಾರ ಮಾಡಿದ್ದಾರೆ. ನಿನ್ನೆ ಮಧ್ಯಾಹ್ನ 1 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ಶಕ್ತಿ ಯೋಜನೆಯಡಿ ಸುಮಾರು 5 ಲಕ್ಷದ 71 ಸಾವಿರಕ್ಕೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ.

ಯೋಜನೆ ಜಾರಿಗೊಂಡ ಬೆನ್ನಲ್ಲೇ ಸಾಕಷ್ಟು ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯದ ಲಾಭವನ್ನು ಪಡೆದುಕೊಂಡಿದ್ದಾರೆ. ಕೆಎಸ್ಆರ್​ಟಿಸಿ, ಬಿಎಂಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಒಟ್ಟು ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ 1.40 ಕೋಟಿ ರೂ. ಆಗಿದೆ.

ನಿನ್ನೆ ಮಧ್ಯರಾತ್ರಿವರೆಗೆ ಕೆಎಸ್​ಆರ್​ಟಿಸಿ ಯಲ್ಲಿ 1,93,83 ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದರಿಂದ ಕೆಎಸ್​ಆರ್​ಟಿಸಿಗೆ 58.16 ಲಕ್ಷ ರೂ. ವೆಚ್ಚ ತಗುಲಿದೆ. ಇನ್ನು ಬಿಎಂಟಿಸಿಯಲ್ಲಿ 2,01,215 ಮಹಿಳೆಯರು ಪ್ರಯಾಣ ಮಾಡಿದ್ದು, ಇದಕ್ಕೆ 26.19 ಲಕ್ಷ ರೂ. ವೆಚ್ಚವಾಗಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯಲ್ಲಿ 1,22,354 ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದು, ಇದಕ್ಕೆ 36.16 ಲಕ್ಷ ರೂ. ವೆಚ್ಚವಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರು 53,623, ತಗುಲಿದ ವೆಚ್ಚ 19.70 ಲಕ್ಷ ರೂ. ವಾಗಿದೆ.

ಭಾನುವಾರ ಮಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಮುಂಭಾಗ ಶಕ್ತಿ ಯೋಜನೆಗೆ ಅದ್ದೂರಿ ಚಾಲನೆ ನೀಡಿದ್ದರು. ಐದು ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯನ್ನು ಮೊದಲಿಗೆ ಜಾರಿಗೆ ತಂದಿದ್ದಾರೆ. ಮಹಿಳೆಯರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ ಎಂದಿದ್ದ ಅವರು, ಯೋಜನೆಗೆ ಚಾಲನೆ ನೀಡಿ ಸ್ವತಃ ವಿಧಾನಸೌಧದಿಂದ ಮೆಜೆಸ್ಟಿಕ್ ವರೆಗೂ ಪ್ರಯಾಣ ಮಾಡಿದ್ದರು. ಸಿದ್ದರಾಮಯ್ಯ ಜೊತೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಸಚಿವರು ಪ್ರಯಾಣ ಮಾಡಿದ್ದರು. ಬಳಿಕ ಇದೇ ಸಂದರ್ಭದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಏಕ ಕಾಲದಲ್ಲಿ ಶಕ್ತಿ ಯೋಜನೆ ಜಾರಿಯಾಗಿತ್ತು.

ಶಕ್ತಿ ಯೋಜನೆ ಕುರಿತು ಬೀದಿ ನಾಟಕ ಪ್ರದರ್ಶನ :ಶಕ್ತಿ ಯೋಜನೆಗೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಬಿಎಂಟಿಸಿ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದು, ಈ ಹಿನ್ನೆಲೆಯಲ್ಲಿ ಇಂದು (ಸೋಮವಾರ) ನಗರದ ಮೆಜೆಸ್ಟಿಕ್​ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆ ಕುರಿತು ವಿಶೇಷ ಬೀದಿ ನಾಟಕ ಪ್ರದರ್ಶನವನ್ನು ಕಲಾ ತಂಡಗಳು ಮತ್ತು ಸಿಬ್ಬಂದಿಗಳು ನಡೆಸಿದರು. ಸಿಬ್ಬಂದಿಗಳ ಮತ್ತು ಪ್ರಯಾಣಿಕರ ಪಾತ್ರವನ್ನು ನಿರ್ವಹಿಸಿ ನೆರೆದ ಪ್ರಯಾಣಿಕರಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳು ಮುಂದಾದರು.

ಬಿಎಂಟಿಸಿ ಎಂಡಿ ಸತ್ಯವತಿ ಅವರ ನಿರ್ದೇಶನದಂತೆ ನಾಟಕ ಪ್ರದರ್ಶನಗಳನ್ನು ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತೆ ಹಲವು ಕಡೆ ಆಯೋಜಿಸಲಾಗಿದೆ. ಮಹಿಳಾ ಪ್ರಯಾಣಿಕರಿಗೆ ಯೋಜನೆಯ ಸದ್ಬಳಕೆ ಮತ್ತು ಲಾಭದ ಕುರಿತು ಅರಿವು ಮೂಡಿಸಲು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾರಿಗೆ ನಿಗಮದ ಸಿಬ್ಬಂದಿಗಳು ತಿಳಿಸಿದ್ದಾರೆ.

ಇದನ್ನೂ ಓದಿ :ಶಕ್ತಿ ಯೋಜನೆ ಎಫೆಕ್ಟ್​: ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ.. ಖಾಸಗಿ ಬಸ್​ಗಳು ಬಣ ಬಣ

ABOUT THE AUTHOR

...view details