ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಸೋಂಕು ಸಾವು-ನೋವು ಅಷ್ಟೇ ಕೊಟ್ಟಿಲ್ಲ. ಬದಲಿಗೆ ಹಲವರ ಕನಸಿಗೆ, ಭವಿಷ್ಯಕ್ಕೆ ಅಡ್ಡಗಾಲು ಹಾಕಿದೆ.
ಹೌದು, ಕೊರೊನಾ ಹರಡುವಿಕೆಯ ಕಾರಣಕ್ಕೆ ಲಾಕ್ ಡೌನ್ ನಂತಹ ಅಸ್ತ್ರ ಪ್ರಯೋಗ ಮಾಡಿದ್ದು ಗೊತ್ತೇ ಇದೆ. ಇತ್ತ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲಾ-ಕಾಲೇಜಿಗೆ ಬೀಗ ಹಾಕಲಾಗಿತ್ತು. ಈ ವರ್ಷದ ಶೈಕ್ಷಣಿಕ ಸಾಲು ಕೂಡ ಆನ್‌ಲೈನ್‌ನಲ್ಲೇ ನಡೆಯಲಿದ್ದು, ಸರ್ಕಾರಿ ಮಕ್ಕಳ ಪಾಡು ಯಾರಿಗೂ ಬೇಡ. ದೂರದರ್ಶನದಲ್ಲಿ ಕಾರ್ಯಕ್ರಮಗಳು ಪ್ರಸಾರವಾದರೂ ಮಕ್ಕಳ ಶಿಕ್ಷಣಕಷ್ಟೇ ಅಲ್ಲ, ಅವರಗೆ ನೀಡಲಾಗುತ್ತಿದ್ದ ಹಲವು ಯೋಜನೆಗೆ ಕತ್ತರಿ ಹಾಕುವಂತಾಗಿದೆ.
ಹೌದು, ಬಿಜೆಪಿ - ಜೆಡಿಎಸ್ ಮೈತ್ರಿ ಸರ್ಕಾರ ಇದ್ದ ಸಂದರ್ಭದಲ್ಲಿ ಉಚಿತ ಬೈಸಿಕಲ್ ವಿತರಣಾ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ ಇದೀಗ ಕೊರೊನಾ ಹೊಡೆತಕ್ಕೆ ಸಿಲುಕಿದ್ದು ಇದೀಗ ಈ ಪ್ರೋತ್ಸಾಹದಾಯಕ ಯೋಜನೆಗೆ ತೊಡಕುಂಟಾಗಿದೆ. ಸರ್ಕಾರ ಅನುದಾನ ಕೊಟ್ಟರಷ್ಟೇ ಈ ಶೈಕ್ಷಣಿಕ ವರ್ಷಕ್ಕೆ ಉಚಿತ ಬೈಸಿಕಲ್ ವಿತರಣೆಯನ್ನ ವಿದ್ಯಾರ್ಥಿಗಳಿಗೆ ಮಾಡಲಾಗುತ್ತೆ ಅಂತ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಗಳು ಹೇಳಿವೆ. ಕಳೆದ ವರ್ಷ ಲಾಕ್‌ಡೌನ್ ಬಿಕ್ಕಟ್ಟು ಇದ್ದರೂ ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆ ಮಾಡುವುದನ್ನ ನಿಲ್ಲಿಸುವುದಿಲ್ಲ ಅಂತ ಸಿಎಂ ಯಡಿಯೂರಪ್ಪ ಹೇಳಿದರು. ಆದರೆ 2021-22ನೇ ಶೈಕ್ಷಣಿಕ ಸಾಲಿನ 8 ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಆಗುವುದು ಕಷ್ಟ ಎನ್ನಲಾಗುತ್ತಿದೆ. ಬಜೆಟ್‌ನಲ್ಲಿ ಇದಕ್ಕಾಗಿ ಅನುದಾನ ಮೀಸಲು ಇಟ್ಟಿಲ್ಲ, ಹೀಗಾಗಿ ಶಾಲಾ ಮಕ್ಕಳಿಗೆ ಸೈಕಲ್ ಸಿಗುವುದು ಅನುಮಾನವಾಗಿದೆ.
ಉಚಿತ ಬೈಸಿಕಲ್ ಯೋಜನೆ ಶುರುವಾಗಿದ್ದು ಯಾವಾಗ?
ಅಂದಹಾಗೆ, 2006-2007ನೇ ಸಾಲಿನಲ್ಲಿ ಉಚಿತ ಬೈಸಿಕಲ್ ವಿತರಣಾ ಯೋಜನೆಗೆ ಚಾಲ್ತಿ ನೀಡಲಾಯ್ತು. ಇದರ ಮೂಲ ಉದ್ದೇಶವಾಗಿದ್ದು, ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶದ ಮಕ್ಕಳಿಗೆ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಉಚಿತ ಬೈಸಿಕಲ್ ವಿತರಣೆ ಮಾಡಲಾಗುತ್ತಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ '8 ನೇ' ತರಗತಿಯ ಬಡತನ ರೇಖೆಗಿಂತ ಕೆಳಗೆ ಇರುವ ಹೆಣ್ಣು ಮಕ್ಕಳಿಗೆ ಈ ಸೌಲಭ್ಯ ಒದಗಿಸಲಾಗುತ್ತಿತ್ತು. ಆದರೆ 2007-2008ನೇ ಸಾಲಿನಿಂದ ಈ ಯೋಜನೆಯನ್ನು ನಗರ ಪ್ರದೇಶದ ಬಿಪಿಎಲ್ ಕಾರ್ಡ್ ಕುಟುಂಬದ ಹೆಣ್ಣು-ಗಂಡು ಮಕ್ಕಳಿಗೂ ವಿಸ್ತರಿಸಲಾಯಿತು.