ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಉತ್ತರಹಳ್ಳಿ ಮತ್ತು ಸುತ್ತಮುತ್ತಲಿನ ವಾರ್ಡ್‌ಗಳ ಬಡ ವರ್ಗದ ಮಕ್ಕಳ ಅನುಕೂಲಕ್ಕಾಗಿ ಪದವಿಪೂರ್ವ ಕಾಲೇಜನ್ನು ಹೊಸದಾಗಿ ಪ್ರಾರಂಭಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ದೊರೆಯಲಿದೆ. ಈ ಕುರಿತು ಪಾಲಿಕೆ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಬಿಬಿಎಂಪಿಯ ಉತ್ತರಹಳ್ಳಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದ ಹೆಚ್.ಇ.ಪಿ.ಎಸ್, ವಾಣಿಜ್ಯ ವಿಭಾಗದ ಹೆಚ್.ಇ.ಬಿ.ಎ, ಸಿ.ಇ.ಬಿ.ಎ, ವಿಜ್ಞಾನ ವಿಭಾಗದ ಪಿ.ಸಿ.ಎಂ.ಬಿ ಮತ್ತು ಪಿ.ಸಿ.ಎಂ.ಸಿ ಸಂಯೋಜನೆಗಳುಳ್ಳ ತರಗತಿಗಳಿಗೆ ಉಚಿತ ಪ್ರವೇಶಾತಿ ನೀಡಲಾಗುವುದು ಎಂದು ಹೇಳಿದೆ.
ಪಾಲಿಕೆವತಿಯಿಂದ ಉಚಿತ ಪಠ್ಯ-ಪುಸ್ತಕಗಳು, ಉಚಿತ ಸಮವಸ್ತ್ರ, ಸ್ವೇಟರ್, ಟ್ರಾಕ್ ಪ್ಯಾಂಟ್, ಬ್ಲೇಸರ್, ಟ್ಯಾಬ್ ಮತ್ತು ಲ್ಯಾಪ್‌ಟಾಪ್‌ಗಳು ವಿದ್ಯಾರ್ಥಿಗಳಿಗೆ ದೊರೆಯಲಿದೆ. ಉತ್ತಮ ಗ್ರಂಥಾಲಯ, ಇ-ಲೈಬ್ರರಿ, ಪ್ರಯೋಗಾಲಯಗಳ ವ್ಯವಸ್ಥೆಯ ಜೊತೆಗೆ ಉಚಿತ ಶೈಕ್ಷಣಿಕ ಪ್ರವಾಸ ವಿದ್ಯಾರ್ಥಿಗಳಿಗೆ ಇರಲಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆಗೆ, ಟ್ಯಾಲಿ ಕಲಿಕೆಗೆ ವಿಶೇಷ ತರಬೇತಿ ನೀಡಲಾಗುವುದು ಎಂದು ತಿಳಿಸಿದೆ.