ಬೆಂಗಳೂರು:ರಾಜಧಾನಿಯ ಖಾಸಗಿ ಕಾಲೇಜಿನಲ್ಲಿ ಮಗನಿಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ವೈದ್ಯರೊಬ್ಬರನ್ನು ನಂಬಿಸಿದ ವಂಚಕರು, ಅವರಿಂದ 66 ಲಕ್ಷ ರೂ. ಪಡೆದಿದ್ದಾರೆ. ಬಳಿಕ ವಂಚಕರು ಸೀಟು ಕೊಡಿಸದೇ, ಹಣ ವಾಪಸ್ ಸಹ ನೀಡದೇ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿದ್ದಾರೆ. ಮತ್ತೆ 50 ಲಕ್ಷ ರೂ. ಪಡೆದು ವಂಚಿಸಿರುವ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ವೈದ್ಯರು ನೀಡಿದ ದೂರಿನ ಮೇರೆಗೆ ನಾಗರಾಜ್ ಹಾಗೂ ಮಧು ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೈದ್ಯರೊಬ್ಬರು ತಮ್ಮ ಮಗನಿಗೆ ಬೆಂಗಳೂರಿನ ಕಾಲೇಜೊಂದರಲ್ಲಿ ಎಂಬಿಬಿಎಸ್ ಸೀಟು ಪಡೆಯಲು ಓಡಾಟ ನಡೆಸುತ್ತಿದ್ದರು. ಹಲವು ಸಲ ತಿರುಗಾಡಿದರೂ ಸೀಟು ಸಿಕ್ಕಿರಲಿಲ್ಲ. ಈ ವೇಳೆ ಎಂಟು ವರ್ಷಗಳಿಂದ ಪರಿಚಿತನಾಗಿದ್ದ, ಆರೋಪಿ ನಾಗರಾಜ್ ಸೀಟು ಕೊಡಿಸುತ್ತೇನೆ ಎಂದು ಹೇಳಿದ್ದಾನೆ. ಪರಿಚಯಸ್ಥರಾಗಿದ್ದರಿಂದ ನಂಬಿಕೆ ಮೇರೆಗೆ ಕಳೆದ ವರ್ಷ ಹಂತ ಹಂತವಾಗಿ 66 ಲಕ್ಷ ಕೊಟ್ಟಿದ್ದಾರೆ. ಬಳಿಕ ಎಂಬಿಎಸ್ ಸೀಟು ಕೊಡಿಸದೇ ಹಣ ನೀಡದೆ ನಾಗರಾಜ್ ಆಟ ಆಡಿಸಿದ್ದಾನೆ. ಕೆಲ ತಿಂಗಳ ಬಳಿಕ ಹಣ ನೀಡುವುದಾಗಿ ನಗರಕ್ಕೆ ವೈದ್ಯರನ್ನು ಆರೋಪಿ ಕರೆಯಿಸಿಕೊಂಡಿದ್ದಾನೆ.
ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿದ ಆರೋಪಿಗಳು: ಗಾಂಧಿನಗರದ ಲಾಡ್ಜ್ ನಲ್ಲಿ ವೈದ್ಯ ಪ್ರತ್ಯೇಕ ರೂಮ್ ಬುಕ್ ಮಾಡಿದ್ದರು. ಮಧ್ಯರಾತ್ರಿ ಆರೋಪಿಯ ಅಣತಿಯಂತೆ ಇಬ್ಬರು ಯುವತಿಯರು ಅವರು ಉಳಿದುಕೊಂಡಿದ್ದ ರೂಮಿಗೆ ನುಗ್ಗಿದ್ದಾರೆ. ಬಳಿಕ ಆತನ ಪಕ್ಕದಲ್ಲಿ ಕುಳಿತುಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ನಕಲಿ ಪೊಲೀಸರು ರೂಮ್ಗೆ ಎಂಟ್ರಿ ಕೊಟ್ಟಿದ್ದಾರೆ. ವೇಶ್ಯಾವಾಟಿಕೆ ಜಾಲ ನಡೆಸುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು ರೈಡ್ ಮಾಡಲಾಗಿದೆ ಎಂದಿದ್ದಾರೆ. ಪಕ್ಕದ ರೂಮಿನಲ್ಲಿ ವಾಸ್ತವ್ಯ ಹೂಡಿದ್ದ ನಾಗರಾಜ್ ಹುಡುಗಿಯರ ಜೊತೆ ವೈದ್ಯ ಇರುವ ಪೋಟೋವನ್ನು ತೆಗೆದಿದ್ದಾನೆ. ಬಳಿಕ ಅವರ ಬಳಿ ಇದ್ದ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ.