ಬೆಂಗಳೂರು : ಮನೆಬಾಡಿಗೆ ಪಡೆದು ಮಾಲೀಕರ ಸೋಗಿನಲ್ಲಿ ಮನೆಗಳನ್ನು ಸಾರ್ವಜನಿಕರಿಗೆ ಭೋಗ್ಯಕ್ಕೆ ನೀಡಿ ಅವರಿಂದ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಇಬ್ಬರು ವಂಚಕರನ್ನು ಬಾಣಸವಾಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಂಚನೆಗೊಳಗಾದ ಕಿರಣ್‌ಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ನಕಲಿ ಮನೆ ಮಾಲೀಕರಾದ ಮನೋಹರ್ ನಾನಾವತ್ ಹಾಗೂ ಶೀತಲ್ ನಾನಾವತ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
2018ರಲ್ಲಿ ಕಿರಣ್ ಭೋಗ್ಯಕ್ಕಾಗಿ ಮನೆ ಹುಡುಕುತ್ತಿದ್ದಾಗ ವಂಚಕರು ಒಎಲ್ಎಕ್ಸ್ ಜಾಲತಾಣದಲ್ಲಿ ಲೀಸ್ ಮನೆ ಖಾಲಿ ಇರುವ ಬಗ್ಗೆ ಜಾಹೀರಾತು ಪ್ರಕಟಣೆ ಮಾಡಿದ್ದನ್ನು ನೋಡಿದ್ದಾರೆ. ಪ್ರಕಟಣೆ ಕಂಡು ಆರೋಪಿಗಳನ್ನು ಸಂಪರ್ಕಿಸಿದ ಕಿರಣ್ ಕುಮಾರ್ಗೆ ಹೆಚ್ಬಿಆರ್ ಲೇಔಟ್ ಅಪಾರ್ಟ್ವೊಂದರಲ್ಲಿ ಫ್ಲ್ಯಾಟ್ ತೋರಿಸಿದ್ದಾರೆ.
ವಂಚನೆ ಅರಿಯದ ಕಿರಣ್ ಮಾತುಕತೆ ನಡೆಸಿ ಹಂತಹಂತವಾಗಿ 17 ಲಕ್ಷ ರೂ. ವಂಚಕರಿಗೆ ನೀಡಿ ಮನೆ ಕರಾರು ಪತ್ರ ಮಾಡಿಕೊಂಡು ಅಂದಿನಿಂದ ವಾಸವಾಗಿದ್ದರು. ಅನುಮಾನದ ಮೇರೆಗೆ ಇತ್ತೀಚೆಗೆ ಮನೆ ಮಾಲೀಕರಿಗೆ ಫೋನ್ ಮಾಡಿದಾಗ ಆರೋಪಿಗಳ ಫೋನ್ ಸ್ವಿಚ್ ಆಫ್ ಬಂದಿದೆ. ಬಳಿಕ ವಂಚನೆಗೊಳಗಾಗಿರುವುದು ಬಯಲಾಗಿದೆ. ಈ ಸಂಬಂಧ ದೂರು ನೀಡಿದ ಮೇರೆಗೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮನೆಗಳನ್ನು ಬಾಡಿಗೆ ಪಡೆದು ಮಾಲೀಕರ ಸೋಗಿನಲ್ಲಿ ಬಾಡಿಗೆದಾರರಿಗೆ ಲೀಸ್ ನೀಡುತ್ತಿದ್ದರು. ಅಸಲಿ ಮನೆ ಮಾಲೀಕರಿಗೆ ವಂಚಕರು ಬಾಡಿಗೆ ಕಟ್ಟುತ್ತಿದ್ದರು. ಬಾಡಿಗೆದಾರರಿಂದ ಬಂದ ಹಣವನ್ನು ರಿಯಲ್ ಎಸ್ಟೇಟ್ನಲ್ಲಿ ಹಣ ಹೂಡಿಕೆ ಮಾಡಿ ಕೈಸುಟ್ಟುಕೊಂಡಿದ್ದರು. ನಷ್ಟದ ಪರಿಣಾಮ ಬಾಡಿಗೆ ಪಡೆದ ಮನೆಗಳಿಗೆ ಕೆಲ ತಿಂಗಳಿಂದ ಬಾಡಿಗೆ ಕಟ್ಟಿರಲಿಲ್ಲ.
ಇದರಿಂದ ಮನೆ ಮಾಲೀಕರು ಮನೆ ಬಳಿ ಹೋಗಿ ಪ್ರಶ್ನಿಸಿದಾಗ ವಿಷಯ ಬಹಿರಂಗವಾಗಿದೆ. ಇದೇ ರೀತಿ 42 ಜನರಿಗೆ ಸುಮಾರು 2 ರಿಂದ 3 ಕೋಟಿ ರೂ. ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.