ಬೆಂಗಳೂರು:ರಾಜ್ಯ ಸರ್ಕಾರಕ್ಕೆ ಜಿಎಸ್ಟಿ ಪಾವತಿಸದೆ ವ್ಯವಹಾರ ನಡೆಸುತ್ತಿದ್ದ ಆರೋಪದಡಿ ಖಾಸಗಿ ಹೋಟೆಲ್ ಮಾಲೀಕರೊಬ್ಬರು ತಮ್ಮದೇ ಹೋಟೆಲ್ ನಿರ್ವಹಣೆಯ ಜವಾಬ್ದಾರಿ ನೋಡಿಕೊಳ್ಳುತ್ತಿರುವವರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜೆಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್ ಮಾಲೀಕ ಆದಿತ್ಯ ದೀಪಕ್ ರಹೇಜಾ ಎಂಬುವವರು ನೀಡಿದ ದೂರಿನ ಮೇರೆಗೆ ಹೋಟೆಲ್ ನಿರ್ವಹಣೆ ಜವಾಬ್ದಾರಿ ಹೊತ್ತಿಕೊಂಡಿದ್ದ ರಾಜ್ ಮೆನನ್, ಕ್ರಿಸ್ಟಿನಾ ಚಾನ್, ನೀರಜ್ ಗೋವಿಲ್ ಸೇರಿದಂತೆ ಒಟ್ಟು 10 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
2013ರಲ್ಲಿ ಹೋಟೆಲ್ ಆರಂಭಿಸಿದ್ದ ಮಾಲೀಕ ಆದಿತ್ಯ, ಹೋಟೆಲ್ ನಿರ್ವಹಣೆಗಾಗಿ ಆರೋಪಿಗಳೊಂದಿಗೆ ವ್ಯವಹಾರ ನಡೆಸಿದ್ದರು. ಈ ದಿಸೆಯಲ್ಲಿ ಲಿಖಿತ ಒಪ್ಪಂದವಾಗಿತ್ತು. ಒಪ್ಪಂದದಂತೆ 2013-14 ರಿಂದ ಆರೋಪಿಗಳು ಹೋಟೆಲ್ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಕಳೆದ ಆರೇಳು ವರ್ಷಗಳಿಂದ ಜಿಎಸ್ಟಿ ಪಾವತಿಸಿದ್ದ ಆರೋಪಿಗಳು 2020ರ ಸಾಲಿನಲ್ಲಿ ಸರ್ಕಾರಕ್ಕೆ ಜಿಎಸ್ಟಿ ಪಾವತಿಸಿರಲಿಲ್ಲ. ಹೀಗಾಗಿ ಕಳೆದ ಏಪ್ರಿಲ್ನಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಮಾಲೀಕರಿಗೆ ನೋಟಿಸ್ ಬಂದಿತ್ತು. ನೋಟಿಸ್ ಹಾಗೂ ವ್ಯವಹಾರದ ಅಂಕಿ ಅಂಶ ನೀಡುವಂತೆ ಆದಿತ್ಯ ಕೇಳಿದರೂ ಆರೋಪಿಗಳು ಯಾವುದೇ ಲೆಕ್ಕ ಕೊಟ್ಟಿರಲಿಲ್ಲ.
ಓದಿ: ಜನವರಿಯಲ್ಲಿ ಒಂದಲ್ಲ, 16 ದಿನ ರಜೆ.. ಬ್ಯಾಂಕ್ಗಳಿಗೆ ತೆರಳುವ ಮೊದಲು ಡೇಟ್‌ಗಳು ನೆನಪಿರಲಿ!
ಅಷ್ಟೇ ಅಲ್ಲದೆ ಲೆಕ್ಕ ಪರಿಶೋಧನೆ ಮಾಡಲು ಸರಿಯಾದ ಮಾಹಿತಿ ನೀಡದೆ ಸತಾಯಿಸುತ್ತಿದ್ದರು. ಹೀಗಾಗಿ ಜಿಎಸ್ಟಿ ಪಾವತಿಸದೆ ಅಗ್ರಿಮೆಂಟ್ ಷರತ್ತು ಉಲ್ಲಂಘಿಸುವುದಲ್ಲದೆ ಸರ್ಕಾರಕ್ಕೆ ಪಾವತಿಸಬೇಕಾದ ಜಿಎಸ್ಟಿ ಹಣ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಹೋಟೆಲ್ ಮಾಲೀಕ ಆದಿತ್ಯ ದೀಪಕ್ ಪೊಲೀಸರಿಗೆ ದೂರು ನೀಡಿದ್ದಾರೆ.