ಬೆಂಗಳೂರು/ಮಂಗಳೂರು: ಬಹುಕೋಟಿ ವಂಚನೆ ಮತ್ತು ಅಕ್ರಮ ಹಣಕಾಸು ವಹಿವಾಟು ಆರೋಪದಡಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಮುಂಬೈ ಮೂಲದ ಕರಣ್ ಗ್ರೂಪ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಕಂಪನಿಯ ಮುಖ್ಯಸ್ಥ ಮಹೇಶ್ ಬಿ. ಓಝ ಬಂಧಿತರು. ರಿಯಲ್ ಎಸ್ಟೇಟ್ ಉದ್ಯಮಕ್ಕಾಗಿ ಹಲವರಿಂದ 500 ಕೋಟಿ ರೂ. ಹೂಡಿಕೆ ಮಾಡಿಸಿಕೊಂಡು ವಂಚಿಸಿದ ಗಂಭೀರ ಆರೋಪ ಇವರ ಮೇಲಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹೇಶ್‌ರನ್ನು ಬಂಧಿಸಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇವರು ಕರಣ್ ಗ್ರೂಪ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಹೆಸರಿನಲ್ಲಿ ಹಲವರಿಂದ ವಿವಿಧ ಯೋಜನೆಗೆ ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ಹೂಡಿಕೆ ಹಣವನ್ನು ಹೂಡಿಕೆ ಮಾಡಿರುವುದಾಗಿ ಮತ್ತು ಕಮಿಷನ್ ನೀಡಿರುವುದಾಗಿಯೂ ದಾಖಲೆ ಸೃಷ್ಟಿಸಿದ್ದರು. ಈ ಬಗ್ಗೆ ಕರ್ನಾಟಕದ ವಿವಿಧೆಡೆ ಹಲವು ಎಫ್ಐಆರ್ ದಾಖಲಾಗಿದ್ದವು. ಈ ಮುಖೇನ ಒಟ್ಟಾರೆ ಅಂದಾಜು 526 ಕೋಟಿ ರೂ. ವಂಚನೆ ಮಾಡಿರುವ ಆರೋಪ ಕೇಳಿಬಂದಿತ್ತು. ಸಿಐಡಿ ಅಧಿಕಾರಿಗಳು ಮಹೇಶ್‌ರನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ತನಿಖೆಯ ವೇಳೆ ಆರೋಪಿ ಮಹೇಶ್ ಬೋಪಕುಮಾರ್ ಓಝ ಹೆಸರಿನಲ್ಲಿ ಬೇರೆ ಕಂಪನಿಯಲ್ಲಿ 121.5 ಕೋಟಿ ರೂ. ಹೂಡಿಕೆ ಮಾಡಿ ಮತ್ತೊಂದು ಕಂಪನಿ ನಡೆಸುತ್ತಿರುವುದು ಬೆಳಕಿಗೆ ಬಂದಿತ್ತು. ಅಕ್ರಮ ಹಣಕಾಸು ವಹಿವಾಟು ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹೇಶ್‌ನನ್ನು ಬಂಧಿಸಲಾಗಿದೆ ಎಂದು ಇಡಿ ಮಾಹಿತಿ ನೀಡಿದೆ.