'ಸ್ವಾಮೀಜಿ ಬಂಧನವಾಗಲಿ, ಸತ್ಯ ತಿಳಿಯಲಿದೆ' ಎಂದ ಚೈತ್ರಾ ಕುಂದಾಪುರ ಬೆಂಗಳೂರು :ವಿಧಾನಸಭಾ ಚುನಾವಣಾ ಅಭ್ಯರ್ಥಿಯಾಗಿದ್ದ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಗಂಭೀರ ಆರೋಪ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದಾರೆ. ಬುಧವಾರ ತಡರಾತ್ರಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಕಳೆದ ವಂಚನೆ ಆರೋಪಿ ಚೈತ್ರಾ ಕುಂದಾಪುರ ಅವರನ್ನು ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಕರೆತರಲಾಯಿತು. ಈ ವೇಳೆ ಕಾರಿನಿಂದ ಇಳಿದು ಹೋಗುವಾಗ, "ಸ್ವಾಮೀಜಿ ಸಿಕ್ಕಿಹಾಕಿಕೊಳ್ಳಲಿ, ಎಲ್ಲಾ ಸತ್ಯ ಹೊರಗಡೆ ಬರಲಿದೆ. ದೊಡ್ಡ- ದೊಡ್ಡವರ ಹೆಸರು ಕೂಡ ಬಹಿರಂಗ ಆಗಲಿದೆ. ಇಂದಿರಾ ಕ್ಯಾಂಟೀನ್ ಬಿಲ್ ಬಾಕಿಯಿದೆ, ಹಾಗಾಗಿ ಈ ರೀತಿ ಷಡ್ಯಂತ್ರ ಮಾಡಿದ್ದಾರೆ" ಎನ್ನುತ್ತಾ ಪೊಲೀಸ್ ಠಾಣೆಯತ್ತ ತೆರಳಿದರು.
ಈಗಾಗಲೇ ಸಿಸಿಬಿ ಅಧಿಕಾರಿಗಳು ನ್ಯಾಯಾಲಯದ ಮುಂದೆ ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದು, ಪ್ರಕರಣದಲ್ಲಿ ಹಣ ವಹಿವಾಟು ನಡೆದಿರುವ ಉಡುಪಿ, ಚಿಕ್ಕಮಗಳೂರು, ಕಲಬುರಗಿ ಹಾಗೂ ಬೆಂಗಳೂರಿನ ಕೆಲ ಭಾಗದಲ್ಲಿ ಮಹಜರು ನಡೆಸಲಿದ್ದಾರೆ. ಆರೋಪಿಗಳ ಬ್ಯಾಂಕ್ ಖಾತೆ ಮೇಲೆ ಅಧಿಕಾರಿಗಳು ಕಣ್ಣಿಟ್ಟಿದ್ದು, ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುವ ಸಾಧ್ಯತೆಯಿದೆ.
ಪ್ರಕರಣದಲ್ಲಿ ಇನ್ನಷ್ಟು ಜನ ಭಾಗಿಯಾಗಿರುವ ಶಂಕೆಯಿದೆ. ಇತ್ತ ಪ್ರಮುಖ ಆರೋಪಿ ಹಾಲಶ್ರೀ ಸ್ವಾಮೀಜಿ ತಲೆಮರೆಸಿಕೊಂಡಿದ್ದು, ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ. ಅವರ ಬಂಧನದ ಬಳಿಕ ವಂಚನೆ ಹಿಂದೆ ಯಾರಿದ್ದಾರೆ? ಹಣ ಯಾರ್ಯಾರಿಗೆ ಸೇರಿದೆ? ಎಂಬುದು ತಿಳಿದುಬರುವ ನಿರೀಕ್ಷೆ ಇದೆ.
10 ದಿನ ಪೊಲೀಸ್ ಕಸ್ಟಡಿ:ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪದಡಿ ಮಂಗಳವಾರ ರಾತ್ರಿ ಬೆಂಗಳೂರಿನ ಸಿಸಿಬಿ ಪೊಲೀಸರು ಪ್ರಮುಖ ಆರೋಪಿತೆ ಚೈತ್ರಾ ಕುಂದಾಪುರ ಸೇರಿ 6 ಮಂದಿಯನ್ನು ಬಂಧಿಸಿದ್ದರು. ಚೈತ್ರಾ ಕುಂದಾಪುರ, ರಮೇಶ್, ಧನರಾಜ್, ಶ್ರೀಕಾಂತ್, ಪ್ರಜ್ವಲ್ ಎಂಬವರನ್ನು ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿ ಬಂಧಿಸಲಾಗಿದ್ದು, ಈಗಾಗಲೇ ನ್ಯಾಯಾಲಯವು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಇದನ್ನೂ ಓದಿ:ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಸೇರಿ 6 ಆರೋಪಿಗಳ ಬಂಧನ
ಬುಧವಾರ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು. ಆರೋಪಿಗಳ ವಿರುದ್ಧ 5 ಕೋಟಿ ರೂ.ಗೂ ಹೆಚ್ಚು ಹಣ ವಂಚನೆ ಆರೋಪ ಇದ್ದು, ಕೃತ್ಯ ಎಸಗಲು ವ್ಯವಸ್ಥಿತವಾಗಿ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ. ಬಂಧಿತರಿಂದ ಹಣ ರಿಕವರಿ ಮಾಡಿಕೊಳ್ಳಬೇಕಿದೆ. ಹೀಗಾಗಿ ಹತ್ತು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಬೇಕು ಎಂದು ಸಿಸಿಬಿ ಪರ ವಕೀಲರು ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ನ್ಯಾಯಾಲಯವು ಸೆಪ್ಟೆಂಬರ್ 23ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಗಗನ್ ಕಡೂರು ಎಂಬಾತನನ್ನು ಮಂಗಳವಾರವೇ ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ವಂಚನೆ ಆರೋಪ ಪ್ರಕರಣ: ಚೈತ್ರಾ ಕುಂದಾಪುರ ಸೇರಿ ಐವರು ಆರೋಪಿಗಳು 10 ದಿನಗಳ ಕಾಲ ಪೊಲೀಸ್ ವಶಕ್ಕೆ