ಬೆಂಗಳೂರು: ಆನ್‍ಲೈನ್ ಅರ್ನಿಂಗ್ ಆ್ಯಪ್ ಹೆಸರಿನ ಸೂಪರ್ ಲೈಕ್ ಅಪ್ಲಿಕೇಷನ್ ಹಾಗೂ ಆನ್‍ಲೈನ್ ಮೂಲಕ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ನಂಬಿಸಿ ಕೋಟ್ಯಾಂತರ ರೂ. ಹೂಡಿಕೆ ಮಾಡಿಸಿಕೊಂಡು ವಂಚಿಸುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 20 ಮಂದಿಯನ್ನು ನಗರದ ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ಬ್ಯಾಂಕ್ ಖಾತೆಯಲ್ಲಿದ್ದ 16.4 ಕೋಟಿ ರೂ.ಗೂ ಅಧಿಕ ಹಣವನ್ನು ತಡೆಹಿಡಿಯಲಾಗಿದ್ದು, 14.11 ಲಕ್ಷ ರೂ. ನಗದು, 7ಕ್ಕೂ ಅಧಿಕ ಮೊಬೈಲ್‍ಗಳು, ಎರಡು ಲ್ಯಾಪ್‍ಟಾಪ್, ಎರಡು ಕಾರುಗಳು ಹಾಗೂ ಇನ್ನಿತರ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ನಿರುದ್ಯೋಗಿಗಳೇ ಟಾರ್ಗೆಟ್:
ಕೊರೊನಾದಿಂದ ಉದ್ಯೋಗ ಕಳೆದುಕೊಂಡಿದ್ದ ನಿರುದ್ಯೋಗಿಗಳನ್ನೇ ಗುರಿಯಾಗಿಸಿಕೊಂಡು ಆನ್‍ಲೈನ್ ಅರ್ನಿಂಗ್ ಆ್ಯಪ್ ಸೃಷ್ಟಿಸಿದ್ದ ಆರೋಪಿಗಳು ಈ ಆ್ಯಪ್‍ನಲ್ಲಿ ಬರುವ ಸೆಲೆಬ್ರಿಟಿಗಳ ವಿಡಿಯೋಗಳನ್ನು ಶೇರ್ ಮಾಡಿದರೆ ಪ್ರತಿ ವಿಡಿಯೋಗಳಿಗೆ 20 ರೂ. ನೀಡುವುದಾಗಿ ನಂಬಿಸಿದ್ದರು.
ಅದರಂತೆ, ಸಾಮಾಜಿಕ ಜಾಲತಾಣವಾದ ಫೇಸ್‍ಬುಕ್, ಇನ್ಸ್ಟಾಗ್ರಾಮ್, ವಾಟ್ಸ್ಆ್ಯಪ್, ಟ್ವಿಟರ್ ಮೂಲಕ ಈ ಆ್ಯಪ್ ಪರಿಚಯಿಸಿದ್ದರು. ಇದನ್ನು ಡೌನ್‍ಲೋಡ್ ಮಾಡಿಕೊಳ್ಳುವ ಗ್ರಾಹಕರನ್ನು ಫೋನ್ ಮೂಲಕ ಸಂಪರ್ಕಿಸುತ್ತಿದ್ದರು. ಬಳಿಕ ಮನೆಯಿಂದಲೇ ಪಾರ್ಟ್‍ಟೈಮ್ ಟಾಸ್ಕ್ ಆಗಿ ನೀಡಿ ಸೆಲೆಬ್ರಿಟಿಗಳ ವಿಡಿಯೋ, ಫೋಟೋಗಳನ್ನು ಸೂಪರ್ ಲೈಕ್ ಅಪ್ಲಿಕೇಷನ್ ಮೂಲಕ ಶೇರ್ ಮಾಡಿದಾಗ ಪ್ರತಿ ವಿಡಿಯೋ, ಫೋಟೋ 20 ರೂ ಕೊಡುವುದಾಗಿ ನಂಬಿಸಿದ್ದರು. ಇದಕ್ಕೆ ಗ್ರಾಹಕರು ಮೊದಲೇ 30ರಿಂದ 80 ಸಾವಿರ ರೂ.ವರೆಗೆ ಆರೋಪಿಗಳು ಹೇಳಿದ ಖಾತೆಗೆ ಠೇವಣಿ ಇಟ್ಟು ಟಾರಿಫ್ ಪಡೆಯಬೇಕು ಎಂದು ತಿಳಿಸಿದ್ದರು.
ಸೈಯದ್ ಎಂಬುವರು 50 ಸಾವಿರ ರೂ. ಡೆಪಾಸಿಟ್ ಮಾಡಿದ ಬಳಿಕ ಟಾರಿಫ್ ಪಡೆದು ಸ್ವಲ್ಪ ಹಣ ಗಳಿಸಿದ್ದರು. ಇದನ್ನು ಪಡೆಯಲು ಹೋದಾಗ ಇನ್ನೂ ಹೆಚ್ಚಿನ ಹಣ ಡೆಪಾಸಿಟ್ ಮಾಡಿ, ಜತೆಗೆ ಪರಿಚಯಸ್ಥರಿಂದಲೂ ಹೂಡಿಕೆ ಮಾಡಿಸಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಆಸೆ ಹುಟ್ಟಿಸಿದ್ದರು. ಈ ಮಾತನ್ನು ನಂಬಿದ ಸೈಯದ್ 44 ಗ್ರಾಹಕರಿಂದ 19.76 ಲಕ್ಷ ರೂ. ಹೂಡಿಕೆ ಮಾಡಿಸಿದ್ದರು. ದಿನ ಕಳೆದಂತೆ ಯಾವುದೇ ಹಣ ಬರದಿದ್ದಾಗ ತಾವು ಮೋಸ ಹೋಗಿರುವುದನ್ನು ತಿಳಿದು ಹಣ ಹೂಡಿಕೆ ಮಾಡಿಸಿಕೊಂಡಿದ್ದ ಶರ್ಮಾ, ಅಬ್ದುಲ್, ಕಾರ್ಟೂನ್, ಅಶೋಕ್ ಕುಮಾರ್ ವಿರುದ್ಧ ಬನಶಂಕರಿ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನನ್ವಯ ಕಾರ್ಯಾಚರಣೆ ನಡೆಸಿ ಹಣ ಹೂಡಿಕೆ ಮಾಡಿರುವ 210 ಮಂದಿ ವಿಚಾರಣೆ ನಡೆಸಿದ ಬಳಿಕ 14 ಮಂದಿ ಆರೋಪಿಗಳನ್ನು ಬಂಧಿಸಿ, ಹೂಡಿಕೆ ಮಾಡಿಸಿಕೊಂಡಿದ್ದ ನಾನಾ ಬ್ಯಾಂಕ್ ಖಾತೆಯಲ್ಲಿದ್ದ 5.40 ಕೋಟಿ ರೂ ತಡೆ ಹಿಡಿದಿದ್ದಾರೆ.