ಬೆಂಗಳೂರು : ಸೈಟು ಮಾರಾಟಕ್ಕಿದೆ ಎಂದು ನೀವೇನಾದರೂ ಬೋರ್ಡ್ ಹಾಕಿಕೊಂಡಿದ್ದೀರಾ? ನಿವೇಶನ ಖರೀದಿ ಮಾಡುವ ಸೋಗಿನಲ್ಲಿ ಯಾರಿಗಾದರೂ ದಾಖಲೆಗಳನ್ನು ಕೊಟ್ಟಿದ್ದೀರಾ ?. ಹಾಗಾದರೆ ನೀವೂ ವಂಚನೆಗೊಳಗಾಗಿದ್ದೀರಿ ಎಂದೇ ಅರ್ಥ. ಹೌದು, ಸೈಟು ಖರೀದಿ ನೆಪದಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಬ್ಯಾಂಕ್ ನಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದು ವಂಚಿಸಿ ಪರಾರಿಯಾಗಿದ್ದ ಆರೋಪಿಯನ್ನು ಐದು ವರ್ಷಗಳ ಬಳಿಕ ಶೇಷಾದ್ರಿಪುರಂ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ತುಮಕೂರಿನ ತಿಪಟೂರು ಮೂಲದ ಲೋಕೇಶ್ ಹಾಗೂ ಆತನ ಸಹಚರ ಆಯುಬ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಲೋಕೇಶ್ ಬಂಧನದಿಂದ ಶೇಷಾದ್ರಿಪುರಂ, ಶಂಕರಪುರ, ವಿದ್ಯಾರಣಪುರ ಹಾಗೂ ಜಿಗಣಿ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಏಳು ಪ್ರಕರಣಗಳನ್ನು ಭೇದಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ತಿಳಿಸಿದ್ದಾರೆ.
ಸೈಟು ಮಾರಾಟಕ್ಕಿದೆ ಬೋರ್ಡ್ ಹಾಕುವವರೇ ಇವನ ಟಾರ್ಗೆಟ್: ನಗರದಲ್ಲಿ ಖಾಲಿ ಸೈಟು ಮಾರಾಟಕ್ಕೆ ಲಭ್ಯವಿದೆ ಎಂದು ಎಂದು ಮೊಬೈಲ್ ನಂಬರ್ ಸಮೇತ ಬೋರ್ಡ್ ಹಾಕಿಕೊಳ್ಳುವ ಮಾಲೀಕರನ್ನು ಆರೋಪಿ ಲೋಕೇಶ್ ಸಂಪರ್ಕಿಸುತ್ತಿದ್ದ. ಬಳಿಕ ಸೈಟು ಖರೀದಿಸುವುದಾಗಿ ಹೇಳಿ ಮುಂಗಡವಾಗಿ ಸೈಟಿನ ಮಾಲೀಕರಿಗೆ ಹಣ ನೀಡುತ್ತಿದ್ದ. ಬಳಿಕ ತನ್ನ ವಕೀಲರಿಗೆ ಸೈಟಿನ ದಾಖಲಾತಿಗಳನ್ನು ತೋರಿಸಬೇಕೆಂದು ಮಾಲೀಕರಿಂದ ದಾಖಲೆಗಳನ್ನು ಪಡೆಯುತ್ತಿದ್ದ. ಬಳಿಕ ಅಸಲಿ ದಾಖಲಾತಿ ರೀತಿಯಲ್ಲೇ ನಕಲಿ ದಾಖಲಾತಿಗಳನ್ನು ಸೃಷ್ಟಿಸುತ್ತಿದ್ದ. ಬಳಿಕ ನಕಲಿ ಮಾಲೀಕರನ್ನು ಸೃಷ್ಟಿಸಿ ಅವರಿಂದ ನಿವೇಶನ ಖರೀದಿಸಿರುವುದಾಗಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದ. ನಂತರ ಅದೇ ದಾಖಲಾತಿ ತೆಗೆದುಕೊಂಡು ಬ್ಯಾಂಕಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದು ಬ್ಯಾಂಕುಗಳಿಗೆ ವಂಚಿಸುತ್ತಿದ್ದ. ನಂತರ ಮೊದಲ ಮೂರು ತಿಂಗಳು ಬ್ಯಾಂಕ್ಗಳಿಗೆ ಸಾಲದ ಇಎಂಐ ಹಣವನ್ನು ಕಟ್ಟಿ ನಂತರ ಸಾಲ ಪಾವತಿಸದೆ ವಂಚಿಸುತ್ತಿದ್ದ. ಇದೇ ರೀತಿ ಮಾಡಿ ಹಲವು ಬ್ಯಾಂಕ್ ಗಳಲ್ಲಿ ಇದುವರೆಗೂ ಸುಮಾರು 2 ಕೋಟಿ ರೂಪಾಯಿವರೆಗೂ ವಂಚಿಸಿರುವುದಾಗಿ ಡಿಸಿಪಿ ಮಾಹಿತಿ ನೀಡಿದ್ದಾರೆ.