ಬೆಂಗಳೂರು: ಬ್ಯಾಂಕ್ ಅಧಿಕಾರಿ ಆರೋಪಿಗಳೊಡನೆ ಶಾಮೀಲಾಗಿ ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣ ಇತ್ತೀಚೆಗೆ ಬಸವನಗುಡಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಬೆಳಕಿಗೆ ಬಂದಿತ್ತು. ಇದೀಗ ಅದೇ ಆರೋಪಿಗಳು ಮತ್ತೊಂದು ಬ್ಯಾಂಕ್ನಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿರುವುದು ಗೊತ್ತಾಗಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವಿದ್ಯಾ ಪೀಠ ಶಾಖೆಯ ಮುಖ್ಯ ವ್ಯವಸ್ಥಾಪಕ ಅಭಿಷೇಕ್ ಕುಮಾರ್ ನೀಡಿದ ದೂರಿನ ಮೇರೆಗೆ, ಬ್ಯಾಂಕ್ ಸಿಬ್ಬಂದಿ ಮಾಕಮ್ ವೆಂಕಟೇಶಯ್ಯ ಶೆಟ್ಟಿ, ಸಹೋದರರಾದ ರಾಜೀವ್, ರಾಘವೇಂದ್ರ ವಿರುದ್ಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಹುತಾತ್ಮ ಯೋಧನ ಕುಟುಂಬಕ್ಕೆ ವಂಚನೆ : ಸಿಆರ್‌ಪಿಎಫ್ ತಂಡ ಮಂಗಳೂರಿಗೆ
2012ರಲ್ಲಿ ವೆಂಕಟೇಶಯ್ಯನನ್ನು ವಿದ್ಯಾ ಪೀಠ ಶಾಖೆಯಲ್ಲಿ ಗ್ರಾಹಕರ ಚಿನ್ನಾಭರಣ ಪರಿಶೀಲಿಸಿ ಪತ್ರ ನೀಡುವ ಗೋಲ್ಡ್ ಅಪ್ರೈಸರ್ ಆಗಿ ನೇಮಕಗೊಳಿಸಲಾಗಿತ್ತು. 2013ರಲ್ಲಿ ಈತನ ತಮ್ಮ ರಾಜೀವ್ 689 ಗ್ರಾಂ ನಕಲಿ ಚಿನ್ನವಿಟ್ಟು 96 ಸಾವಿರ ಲೋನ್ ಪಡೆದಿದ್ದ. ಅದೇ ವರ್ಷ ಸಹೋದರ ರಾಘವೇಂದ್ರ 796 ಗ್ರಾಂ ನಕಲಿ ಚಿನ್ನವಿಟ್ಟು 11 ಲಕ್ಷ 20 ಸಾವಿರ ರೂ. ಹಣ ಪಡೆದುಕೊಂಡಿದ್ದ. ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ಹೇಳಿ ವೆಂಕಟೇಶಯ್ಯ ಪ್ರಮಾಣೀಕರಿಸಿದ್ದ ಎಂದು ಆರೋಪಿಸಲಾಗಿದೆ. ನಂಬಿಕೆ ಬರಿಸಲು ಪಡೆದಿದ್ದ ಸಾಲವನ್ನು ಆರೋಪಿಗಳು ಬ್ಯಾಂಕ್ಗೆ ಪಾವತಿ ಮಾಡಿದ್ದರು. ಬಳಿಕ 2019ರವರೆಗೂ ಪ್ರತಿ ವರ್ಷ ಬೇರೆ ಖಾತೆಗಳ ಹೆಸರಿನಲ್ಲಿ ನಕಲಿ ಚಿನ್ನವಿಟ್ಟು ರಾಜೀವ್, ರಾಘವೇಂದ್ರ ಕ್ರಮವಾಗಿ 12 ಲಕ್ಷ ಹಾಗೂ 22 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಹಲವು ತಿಂಗಳು ಕಳೆದರೂ ಸಾಲ ಮರುಪಾವತಿ ಮಾಡಿರಲಿಲ್ಲ. ಗಿರವಿ ಇಟ್ಟಿದ್ದ ಚಿನ್ನ ಪರಿಶೀಲಿಸಿದಾಗ ನಕಲಿ ಚಿನ್ನಾಭರಣ ಎಂದು ಗೊತ್ತಾಗಿದೆ. ಬ್ಯಾಂಕ್ ಸಿಬ್ಬಂದಿ ವೆಂಕಟೇಶಯ್ಯ ಕೃತ್ಯದಲ್ಲಿ ಶಾಮೀಲಾಗಿದ್ದು ಬೆಳಕಿಗೆ ಬಂದಿದೆ. ಹೀಗಾಗಿ ಮೂವರು ವಂಚಕರ ವಿರುದ್ದ ಕ್ರಮ ಕೈಗೊಳ್ಳುವಂತೆ ಅಭಿಷೇಕ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಸವಗುಡಿಯ ಶಾಖೆಯಲ್ಲಿಯೂ ಇದೇ ರೀತಿ ದೋಖಾ!
ಇದೇ ರೀತಿ ಬಸವನಗುಡಿ ಠಾಣಾ ವ್ಯಾಪ್ತಿಯ ಸೆಂಟ್ರಲ್ ಬ್ಯಾಂಕ್ನಲ್ಲಿ ಆರೋಪಿಗಳು ವಂಚನೆ ಎಸಗಿದ ಸಂಬಂಧ ಪ್ರಕರಣ ದಾಖಲಾಗಿತ್ತು. ಮೊದಲು ರಾಘವೇಂದ್ರ ಸಿಲ್ವರ್ ಮೇಲೆ ಚಿನ್ನದ ಲೇಪನ ಮಾಡಿ 409 ಗ್ರಾಂ ತೂಕದ ನಕಲಿ ಚಿನ್ನಾಭರಣವನ್ನು ಬ್ಯಾಂಕ್ನಲ್ಲಿ ಅಡವಿಟ್ಟು 6 ಲಕ್ಷ ರೂ. ಸಾಲ ಪಡೆದಿದ್ದ. ಬಳಿಕ ರಾಜೀವ್ 343 ಗ್ರಾಂ ತೂಕದ ನಕಲಿ ಚಿನ್ನಾಭರಣ ಅಡವಿಟ್ಟು 6 ಲಕ್ಷದ 10 ಸಾವಿರ ಪಡೆದಿದ್ದ. ಬಳಿಕ ರಾಜೀವ್, ತನ್ನ ತಮ್ಮ ರಾಘವೇಂದ್ರನ ಹೆಸರಿನಲ್ಲಿ 10 ಲಕ್ಷ ರೂ. ಪಡೆದಿದ್ದ. ಇದಾದ ನಂತರ ಆರೋಪಿ ರಾಘವೇಂದ್ರ ಪತ್ನಿ ಲಾವಣ್ಯ ಹೆಸರಿನಲ್ಲಿ 4 ಲಕ್ಷದ 80 ಸಾವಿರ ಪಡೆದಿದ್ದ. ಇಬ್ಬರು ಆರೋಪಿಗಳು ಒಟ್ಟು ಸುಮಾರು 30 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಬ್ಯಾಂಕ್ ಅಧಿಕಾರಿಗಳಿಗೆ ಅನುಮಾನ ಬಾರದಿರಲು 21 ಲಕ್ಷ ಹಣ ಪಾವತಿ ಮಾಡಿ 8 ಲಕ್ಷ ಸಾಲ ಬಾಕಿ ಉಳಿಸಿಕೊಂಡು ವಂಚಿಸಿದ್ದರು.