ಬೆಂಗಳೂರು: ಕಡಿಮೆ ಬೆಲೆಯಲ್ಲಿ ನಿವೇಶನ ಕೊಡಿಸುವುದಾಗಿ ನಂಬಿಸಿ ಹಲವು ಜನರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡಿದ್ದ ಬೃಂದಾವನ ಪ್ರಾಪರ್ಟೀಸ್ ಮಾಲೀಕ ದಿನೇಶ್ ಗೌಡ ಎಂಬಾತನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಹಾಸನದ ಅರಕಲಗೂಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿರುವ ಪೊಲೀಸರು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಏನಿದು ಪ್ರಕರಣ?ನಗರದ ತಾವರೆಕೆರೆ, ಮಾಗಡಿರೋಡ್, ನೆಲಮಂಗಲ ಹಾಗೂ ಕಗ್ಗಲಿಪುರ ಸೇರಿದಂತೆ ಹಲವು ಕಡೆಗಳಲ್ಲಿ ಕಡಿಮೆ ಬೆಲೆಯಲ್ಲಿ ನಿವೇಶನ ಕೊಡಿಸುವುದಾಗಿ ಹೇಳಿ ಬೃಂದಾವನ ಪ್ರಾಪರ್ಟೀಸ್ ಜನರಿಂದ 1ರಿಂದ 5 ಲಕ್ಷದವರೆಗೆ ಹಣ ಪಡೆದಿತ್ತು. ಹಣ ನೀಡಿದ ಬಳಿಕ ನಿವೇಶನ ಕೇಳಿದರೆ ನೀಡಬೇಕಾಗಿರುವ ಬಡಾವಣೆಯ ಜಾಗ ಅಭಿವೃದ್ದಿಪಡಿಸುತ್ತಿದ್ದು, ಕೆಲಸ ಮುಗಿದ ಬಳಿಕ ನೀಡಲಾಗುವುದು ಎಂದು ಭರವಸೆ ನೀಡುತ್ತಿತ್ತು.
ಹಣ ನೀಡಿ ಹಲವು ವರ್ಷಗಳಾದರೂ ನಿವೇಶನ ಕೊಡಿಸದೆ ಕಂಪನಿ ಸತಾಯಿಸುತ್ತಿತ್ತು. ಈ ನಡುವೆ ಕಂಪೆನಿ ಮುಖ್ಯಸ್ಥ ದಿನೇಶ್ ಗೌಡ ತಲೆಮರೆಸಿಕೊಂಡಿದ್ದ. ಈ ಸುದ್ದಿ ತಿಳಿದು ಹಣ ಹೂಡಿಕೆ ಮಾಡಿದವರು, ಏಕಾಏಕಿ ರಾಜಾಜಿನಗರದ ಬೃಂದಾವನ ಪ್ರಾಪರ್ಟೀಸ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಕಂಪೆನಿ ವಿರುದ್ದ 700 ಕ್ಕೂ ಅಧಿಕ ಮಂದಿ ದೂರು ದಾಖಲಿಸಿದ್ದರು.