ಬೆಂಗಳೂರು: ಜನಪ್ರಿಯತೆ ಪಡೆಯುವ ಸಲುವಾಗಿ ಸೂಕ್ತ ಸಮಯಕ್ಕಿಂತ ಮುನ್ನವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫಾಕ್ಸ್‌ಕಾನ್ ಒಪ್ಪಂದ ಕುರಿತು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದು, ಲಾಯರ್, ಲಾಯರ್ ನಿನ್ನ ಹೆಸರು ಬಸವರಾಜ ಬೊಮ್ಮಾಯಿ. ಬೊಮ್ಮಾಯಿ ಸರ್ಕಾರದೊಂದಿಗೆ ಫಾಕ್ಸ್‌ಕಾನ್ ಒಪ್ಪಂದಕ್ಕೆ ಸಹಿ ಹಾಕುವುದು.
ಆಪಲ್ ಐಫೋನ್ ತಯಾರಿಸುವುದು ಮತ್ತು 1,00,000 ಉದ್ಯೋಗಗಳನ್ನು ಸೃಷ್ಟಿಸುವುದು ಎಂಬ ಸಿಎಂ ಬೊಮ್ಮಾಯಿ ಅವರ ಪ್ರತಿಪಾದನೆ ನಕಲಿ ತನದ ಒಂದು ಪ್ರಯತ್ನವಾಗಿದೆ. ಅವರು 40% ಕಮೀಷನ್ ನೀಡದ ಕಾರಣ ಬಹುಶಃ ರದ್ದುಗೊಳಿಸಲಾಗಿದೆ ಎಂದು ಲೇವಡಿ ಮಾಡಿದ್ದಾರೆ. ಸಿಎಂ ಬೊಮ್ಮಾಯಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್:ಐಫೋನ್ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಸಾಧನಗಳನ್ನು ತಯಾರಿಸುವ ಫಾಕ್ಸ್‌ಕಾನ್ ಸಂಸ್ಥೆ ಭಾರತದಲ್ಲಿ ಹೊಸ ಹೂಡಿಕೆ ಒಪ್ಪಂದ ಆಗಿಲ್ಲ. ಆದರೆ ಸಿಎಂ ಬೊಮ್ಮಾಯಿಯವರು ನಿನ್ನೆ ಆ್ಯಪಲ್ ಕಂಪನಿ ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪಿಸಲಿದ್ದು, ಇದರಿಂದ 1 ಲಕ್ಷ ಉದ್ಯೋಗ ಸೃಷ್ಟಿಯಾಗುವುದಾಗಿ ಹೇಳಿದ್ದರು. ಸಿಎಂ ಸುಳ್ಳು ಹೇಳಿದ್ಯಾಕೆ.? ಫಾಕ್ಸ್‌ಕಾನ್ ಸಂಸ್ಥೆ ಹೊಸ ಹೂಡಿಕೆಯ ಬಗ್ಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಇದನ್ನು ಸ್ವತಃ ಆ ಸಂಸ್ಥೆಯೇ ಸ್ಪಷ್ಟಪಡಿಸಿದೆ. ಆದರೆ ಮುಖ್ಯಮಂತ್ರಿಗಳ ಕಚೇರಿ ಕರ್ನಾಟಕದಲ್ಲಿ ಈ ಸಂಸ್ಥೆ 5740 ಕೋಟಿ ಹೂಡಿಕೆ ಮಾಡಲಿದೆ ಎಂದಿದೆ. ಒಪ್ಪಂದವೇ ಆಗದೇ ಹೂಡಿಕೆ ಮಾಡಲು ಹೇಗೆ ಸಾಧ್ಯ.? ರಾಜ್ಯದ ಮುಖ್ಯಮಂತ್ರಿಗಳು ಆಧಾರ ರಹಿತವಾಗಿ ಹೀಗೆ ಮಾತಾಡಬಹುದೇ? ಆ್ಯಪಲ್ ಕಂಪನಿಯ ತಯಾರಿಕಾ ಘಟಕ ಸ್ಥಾಪನೆಯ ಬಗ್ಗೆ ಮುಖ್ಯಮಂತ್ರಿಗಳು ಸುಳ್ಳು ಹೇಳುವ ಮೂಲಕ ರಾಜ್ಯದ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಒಬ್ಬ ಮುಖ್ಯಮಂತ್ರಿ ಹೀಗೆ ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯಬಹುದೆ.? ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ ಬೊಮ್ಮಾಯಿಯವರು ಹೀಗೆ ಸುಳ್ಳು ಹೇಳುವ ಕಲೆಯನ್ನು ಮೋದಿಯವರಿಂದ ಕಲಿತರೆ ? ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.