ಬೆಂಗಳೂರು : ವಿಶ್ವದ ಅತಿ ದೊಡ್ಡ ಎಲೆಕ್ಟ್ರಾನಿಕ್ ತಯಾರಿಕಾ ಕಂಪನಿ ಹಾನ್ ಹಾಯ್ ಟೆಕ್ನಾಲಜಿ ಗ್ರೂಪ್ (ಫಾಕ್ಸ್ ಕಾನ್) ಕಂಪನಿಯು ರಾಜ್ಯದಲ್ಲಿ ಗಣನೀಯ ಗಾತ್ರದ ಹೂಡಿಕೆ ಮಾಡಲು ಮುಂದಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ರಾಜ್ಯದಲ್ಲಿ ಹೂಡಿಕೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ನಗರದ ಖಾಸಗಿ ಹೋಟೆಲ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಫಾಕ್ಸ್ಕಾನ್ ಅಧ್ಯಕ್ಷ ಯಂಗ್ ಲ್ಯೂ ಅವರೊಂದಿಗೆ ಸಭೆ ನಡೆಸಿದರು. ಪರಸ್ಪರ ಸಮಾಲೋಚನೆ ನಂತರ ರಾಜ್ಯದಲ್ಲಿ ಹೂಡಿಕೆ ಮಾಡುವ ಒಡಂಬಡಿಕೆಗೆ ಸಹಿ ಹಾಕಲಾಯಿತು. ಈ ಒಡಂಬಡಿಕೆಯಿಂದಾಗಿ ರಾಜ್ಯದಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಉದ್ಯಮ ಸ್ಥಾಪನೆಗಾಗಿ ಬೆಂಗಳೂರು ವಿಮಾನ ನಿಲ್ದಾಣದ ಸಮೀಪ ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲೂಕುಗಳಲ್ಲಿ 300 ಎಕರೆ ಭೂಮಿ ಗುರುತಿಸಲಾಗಿದೆ. ಈ ಸ್ಥಳವನ್ನು ಈಗಾಗಲೇ ಹೂಡಿಕೆದಾರರು ಪರಿಶೀಲನೆ ನಡೆಸಿ ಆ ಜಾಗದಲ್ಲಿ ತಯಾರಿಕಾ ಘಟಕವನ್ನು ನಿರ್ಮಿಸಲು ಉತ್ಸುಕತೆ ತೋರಿಸಿದ್ದಾರೆ.
ಕೌಶಲ್ಯಯುತ ಮಾನವ ಸಂಪನ್ಮೂಲ: ಒಡಂಬಡಿಕೆ ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರವು ಫಾಕ್ಸ್ ಕಾನ್ಗೆ ಎಲ್ಲ ರೀತಿಯ ಸಹಕಾರ, ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಅತ್ಯಾಧುನಿಕ ತಂತ್ರಜ್ಞಾನಗಳ ಪರಿಣತಿಗೆ ಹೆಸರಾದ ಕಂಪೆನಿ ಫಾಕ್ಸ್ ಕಾನ್ ರಾಜ್ಯದಲ್ಲಿ ಹೂಡಿಕೆ ಮಾಡುತ್ತಿರುವುದು ಸಂತಸ ತಂದಿದೆ. ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿವೆ. ಐಟಿಐಗಳನ್ನು ಇತ್ತೀಚೆಗಷ್ಟೇ ಉನ್ನತೀಕರಿಸಿದ್ದು, ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಅಂತೆಯೇ ಜಿ.ಟಿ.ಟಿ.ಸಿ, ಪಾಲಿಟೆಕ್ನಿಕ್ಗಳು ಹಾಗೂ ಎಂಜಿನಿಯರಿಂಗ್ ಕಾಲೇಜುಗಳು ಅತ್ಯುತ್ತಮ ತಾಂತ್ರಿಕ ಶಿಕ್ಷಣವನ್ನು ನೀಡುವ ಮೂಲಕ ಕೌಶಲ್ಯಯುತ ಮಾನವ ಸಂಪನ್ಮೂಲ ಸೃಜಿಸಲಾಗುತ್ತಿದೆ ಎಂದು ವಿವರಿಸಿದರು.
ತಾಂತ್ರಿಕ ತರಬೇತಿ: ಬೆಂಗಳೂರಿನಲ್ಲಿ ಸುಮಾರು 400 ಸರ್ಕಾರಿ ಹಾಗೂ ಖಾಸಗಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿದ್ದು, ಜಗತ್ತಿನಲ್ಲಿಯೇ ಅತಿ ಹೆಚ್ಚು. ಅಂತೆಯೇ ರಾಜ್ಯವು ಅತ್ಯುತ್ತಮ ಸೆಮಿ - ಕಂಡಕ್ಟರ್ ನೀತಿ ಹೊಂದಿದ್ದು, ಈ ವಲಯದಲ್ಲಿಯೂ ಹೂಡಿಕೆ ಮಾಡುವ ಕುರಿತು ಪರಿಶೀಲಿಸುವಂತೆ ಸಲಹೆ ನೀಡಿದರು. ಇದಲ್ಲದೇ ತಾಂತ್ರಿಕ ತರಬೇತಿ ನೀಡುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಕೈಜೋಡಿಸುವಂತೆ ಸಲಹೆ ನೀಡಿದರು.