ಬೆಂಗಳೂರು:ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಸಂತಸ ವ್ಯಕ್ತಪಡಿಸಿದ್ದಾರೆ. ಮೇಯರ್ ಗೌತಮ್ ಕುಮಾರ್ ಹಾಗೂ ಉಪಮೇಯರ್ ಮೋಹನ್ ರಾಜು ಅವರಿಗೆ ಅಭಿನಂದನೆ ಸಲ್ಲಿಸಿದರು.
ನಾಲ್ಕು ವರ್ಷಗಳ ನಂತರ ಬಿಬಿಎಂಪಿ ಚುಕ್ಕಾಣೆ ಹಿಡಿದ ಬಿಜೆಪಿ.. ಡಿಸಿಎಂ ಅಶ್ವತ್ಥ್ ನಾರಾಯಣ್ ಸಂತಸ.. - BBMP election
ಬಿಬಿಎಂಪಿ ಚುನಾವಣೆಯಲ್ಲಿ ಅತೀ ಹೆಚ್ಚು ಸೀಟುಗಳನ್ನು ಬಿಜೆಪಿ ಪಡೆದಿದ್ದರೂ ಸಹ ಅಧಿಕಾರದ ಚುಕ್ಕಾಣಿ ಹಿಡಿಯಲಾಗಿರಲಿಲ್ಲ. ಆದರೆ, ಇಂದು ಬಿಜೆಪಿಗೆ ಅಧಿಕಾರ ದೊರೆತಿದ್ದು, ಜನರ ತೀರ್ಪಿಗೆ ನ್ಯಾಯ ದೊರೆತಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಸಂತಸ ವ್ಯಕ್ತಪಡಿಸಿದ್ದಾರೆ.
ಜನ ನಮಗೆ ಅತೀ ಹೆಚ್ಚು ಸೀಟುಗಳನ್ನು ಕೊಟ್ಟಿದ್ದರೂ ಸಹ, ಬಿಬಿಎಂಪಿ ಅಧಿಕಾರ ಪಡೆಯುವುದರಲ್ಲಿ ನಾವು ವಂಚಿತರಾಗಿದ್ದೆವು. ಇವತ್ತು ಜನರ ತೀರ್ಪಿಗೆ ನ್ಯಾಯ ಸಿಕ್ಕಂತಾಗಿದೆ. ಇವತ್ತು ಎಲ್ಲಾ ಹಂತಗಳಲ್ಲೂ ಬೆಂಗಳೂರು ಮಹಾನಗರ ಪಾಲಿಕೆ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಲ್ಲಿ ನಮ್ಮದೇ ಬಿಜೆಪಿ ಪಕ್ಷ ಅಧಿಕಾರದಲ್ಲಿರುವುದು. ಬೆಂಗಳೂರು ಅಭಿವೃದ್ಧಿಗೆ ನಮಗೆ ಸುವರ್ಣ ಅವಕಾಶ ಸಿಕ್ಕಂತಾಗಿದೆ. ವ್ಯವಸ್ಥಿತವಾಗಿ ಬೆಂಗಳೂರಿನ ಅಭಿವೃದ್ಧಿಯ ಕಡೆಗೆ ನಮ್ಮ ಗಮನ ಹರಿಸುತ್ತೇವೆ ಎಂದರು.
ಕೊನೆಯ ಹಂತದಲ್ಲಿ ಹೆಸರುಗಳನ್ನು ಅಂತಿಮಗೊಳಿಸುವುದಕ್ಕೆ ಕಾರಣಗಳು ಹಲವಾರಿವೆ. ಆದರೆ, ಮೋಹನ್ ರಾಜುರವರ ಹೆಸರು ಕೇಳಿದ ನಂತರ ಯಾರೂ ವಿರೋಧ ವ್ಯಕ್ತಪಡಿಸದೆ ಅವರಿಗೆ ಉಪ ಮೇಯರ್ ಆಗಲು ಸಹಕರಿಸಿದ್ದಾರೆ. ಇದುವರೆಗೂ ಬೆಂಗಳೂರಿನ ಕೇಂದ್ರದ ಲೋಕಸಭಾ ಕ್ಷೇತ್ರದಿಂದ ಯಾರೊಬ್ಬರೂ ಬಿಜೆಪಿಯ ಮೇಯರ್ ಆಗಿರಲಿಲ್ಲ. ಇದು ಮೊದಲ ಬಾರಿಗೆ ಆಗಿದೆ. ಎರಡನೇ ಬಾರಿ ಪಾಲಿಕೆ ಸದಸ್ಯರಾಗಿರುವ ಗೌತಮ್ ಕುಮಾರ್ ಜೈನ್ ಅವರ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ. ಬೆಂಗಳೂರಿಗೆ ಒಳ್ಳೆ ರೀತಿಯ ಕೊಡುಗೆ ಕೊಡುತ್ತಾರೆ ಎಂಬುದು ನಮ್ಮ ನಂಬಿಕೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ತಿಳಿಸಿದರು.