ಬೆಂಗಳೂರು :ಕೋವಿಡ್ ಸಂಕಷ್ಟಕ್ಕೊಳಗಾಗಿರುವ ಸಾರಿಗೆ ನಿಗಮಗಳು ಇದೀಗ ತನ್ನ ಸಿಬ್ಬಂದಿಗೆ ಪೂರ್ಣ ವೇತನ ನೀಡಲು ಸಾಧ್ಯವಾಗದ ಮಟ್ಟಿಗೆ ತಲುಪಿವೆ. ಈ ಸಂಬಂಧ ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್‌ನ ಅಧ್ಯಕ್ಷ ಅನಂತ ಸುಬ್ಬರಾವ್ ಪತ್ರ ಬರೆದಿದ್ದಾರೆ.
ಕಳೆದ ವರ್ಷದ ಡಿಸೆಂಬರ್ ಹಾಗೂ ಕಳೆದ ಜನವರಿ ತಿಂಗಳ ಸಾರಿಗೆ ನೌಕರರ ವೇತನ ಕೊಡಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇಂದು ನಾಲ್ಕು ನಿಗಮಗಳು ಜನವರಿ ತಿಂಗಳ ಅರ್ಧ ಸಂಬಳ ಪಾವತಿ ಮಾಡಿವೆ.
ಸಾರಿಗೆ ನಿಗಮಗಳ ನೌಕರರು ಸಮಾಜದಲ್ಲಿ ಅತಿ ಕಷ್ಟಪಡುತ್ತಿರುವ ಜೀವಿಗಳೆಂದು ತಮಗೆ ಹೇಳುವ ಅವಶ್ಯಕತೆ ಇಲ್ಲ. ತಾವೇ ಈ ಮಾತನ್ನು ಹಲವಾರು ಬಾರಿ ಹೇಳಿದ್ದೀರಾ ಹಾಗೂ ವೇತನವನ್ನು ಕೊಡಿಸಿದ್ದೀರಾ..
ಇನ್ನೂ ಕೂಡ ಸಾರಿಗೆ ನಿಗಮಗಳು ಸಂಚಾರ ಕಾರ್ಯಾಚಾರಣೆಯಲ್ಲಾಗಲಿ, ಆದಾಯದ ವಿಷಯದಲ್ಲಾಗಲಿ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಹೊರಗೆ ಬಂದಿಲ್ಲ. ಆದ್ದರಿಂದ ಡಿಸೆಂಬರ್ 2020ರ ಹಾಗೂ 2021ರ ಜನವರಿ ವೇತನವನ್ನು ರಾಜ್ಯ ಸರ್ಕಾರದಿಂದ ಪೂರ್ಣವಾಗಿ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ. ಅದೇ ರೀತಿ ಪರಿಸ್ಥಿತಿ ಹಿಂದಿನಂತೆ ಬರುವವರೆಗೂ ಸಾರಿಗೆ ನಿಗಮಗಳ ವೇತನವನ್ನ ಸರ್ಕಾರವೇ ಸಕಾಲದಲ್ಲಿ ಭರಿಸಬೇಕೆಂದು ಒತ್ತಾಯಿಸಿದ್ದಾರೆ.