ಬೆಂಗಳೂರು: ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಿದರೂ ಮತ್ತೆ ಕಳ್ಳತನದಲ್ಲಿ ತೊಡಗಿದ್ದ ನಾಲ್ವರು ಕುಖ್ಯಾತ ಖದೀಮರನ್ನು ಪೀಣ್ಯ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರನ್ನು ಫಯಾಜ್ ಅಹಮ್ಮದ್, ಮಹೇಶ್, ಪ್ರಸಾದ್ ಹಾಗೂ ಸುಮಂತ್ ಎಂದು ಗುರುತಿಸಲಾಗಿದೆ.
ಕಳೆದ ಜೂನ್ 2ರಂದು ಪೀಣ್ಯದ ವಿದ್ಯಾನಗರದ ಮನೆಯೊಂದರಲ್ಲಿ ಹಾಡಹಗಲೇ ಕಳ್ಳತನವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿ ಇನ್ಸ್ಪೆಕ್ಟರ್ ಧರ್ಮೇಂದ್ರ ನೇತೃತ್ವದ ತಂಡ ಈ ನಾಲ್ವರು ಆರೋಪಿಗಳನ್ನು ಬಂಧಿಸಿ ಸುಮಾರು 35.47 ಲಕ್ಷ ಮೌಲ್ಯದ 655 ಗ್ರಾಂ ಚಿನ್ನ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ರೂವಾರಿ ಫಯಾಜ್ ಅಹಮ್ಮದ್ ಮೂಲತಃ ಗುಜರಿ ವ್ಯಾಪಾರಿಯಾಗಿದ್ದು, 1990ರಿಂದ ಕಳ್ಳತನದಲ್ಲಿ ತೊಡಗಿದ್ದ. ಈತನ ವಿರುದ್ಧ ಬೆಂಗಳೂರು, ಮೈಸೂರು, ಮಂಡ್ಯ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ಸುಮಾರು 24 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 6 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಎರಡನೇ ಆರೋಪಿ ಮಹೇಶ್ ಕಾರು ಚಾಲಕನಾಗಿದ್ದು, 2010ರಿಂದ ಕಳ್ಳತನದಲ್ಲಿ ಭಾಗಿಯಾಗಿದ್ದ. ಈತನ ವಿರುದ್ಧ ದಾಖಲಾಗಿದ್ದ 21 ಪ್ರಕರಣಗಳ ಪೈಕಿ 11 ಪ್ರಕರಣಗಳಲ್ಲಿ ಜೈಲು ಶಿಕ್ಷೆಯಾಗಿದೆ. ಮತ್ತಿಬ್ಬರಾದ ಪ್ರಸಾದ್, ಕೊಲೆ ಪ್ರಕರಣದ ಆರೋಪಿಯಾಗಿದ್ದು, ಸುಮಂತ್ ಕದ್ದ ಚಿನ್ನಾಭರಣಗಳನ್ನು ಅಡವಿಡಲು ನೆರವು ನೀಡುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿಗಳೆಲ್ಲರೂ ಜೈಲಿನಲ್ಲಿದ್ದಾಗ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡಿದ್ದರು ತಿಳಿದುಬಂದಿದೆ.
ಹಲವು ಪ್ರಕರಣಗಳಲ್ಲಿ ವರ್ಷಾನುಗಟ್ಟಲೇ ಸೆರಮನೆಯಲ್ಲಿದ್ದರೂ ತಲೆಕೆಡಿಸಿಕೊಳ್ಳದ ಇವರು ಜಾಮೀನು ಪಡೆದು ಹೊರಬಂದು ಮತ್ತೆ ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಕೈಚಳಕ ತೋರಿಸಿದ್ದರು. ಪೊಲೀಸರಿಗೆ ಸಾಕ್ಷ್ಯ ಸಿಗದಿರಲೆಂದು ಕಳ್ಳತನದ ವೇಳೆ ಕೈಗಳಿಗೆ ಗ್ಲೌಸ್ ಧರಿಸುತ್ತಿದ್ದರು. ಅಲ್ಲದೆ ಆರೋಪಿಗಳು ಮೊಬೈಲ್ ಸಹ ಬಳಸುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ :ಯುವಕನೊಟ್ಟಿಗೆ ಮಗಳು ಪರಾರಿ.. ಮನನೊಂದು ಮನೆಯನ್ನೇ ತೊರೆದ್ರು ತಂದೆ-ತಾಯಿ