ಬೆಂಗಳೂರು: ಪಶ್ಚಿಮ ವಿಭಾಗ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮನೆ ಕಳವು ಮತ್ತು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಕಾಡುಗೊಂಡನಹಳ್ಳಿ ವೆಂಕಟೇಶಪುರ ನಿವಾಸಿ ಮಹಮ್ಮದ್ ಹಫೀಜ್ (21) ಬಂಧಿತ ಆರೋಪಿ. ಈತನಿಂದ 8,22 ಲಕ್ಷ ರೂಪಾಯಿ ಮೌಲ್ಯದ 137 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ಈತ ಸುಂಕದಕಟ್ಟೆಯ ಮುತ್ತುರಾಯಸ್ವಾಮಿ ಲೇಔಟ್ ನಿವಾಸಿ ಶಿವಕುಮಾರ್ ಎಂಬವರ ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದನು. ಘಟನೆಗೆ ಸಂಬಂಧಿಸಿದ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು.
ಆರೋಪಿ ವೃತ್ತಿಪರ ಕಳ್ಳನಾಗಿದ್ದು, ಈ ಹಿಂದೆ ರಾಮಮೂರ್ತಿನಗರ ಸೇರಿ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಮನೆಗಳವು ಪ್ರಕರಣದಲ್ಲಿ ಭಾಗಿಯಾಗಿದ್ದನು. ಕೆಲವು ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದಾನೆ. ಬಳಿಕ ಜಾಮೀನು ಪಡೆದು ಹೊರಬಂದು ಹಳೆ ಚಾಳಿ ಮುಂದುವರೆಸುತ್ತಿದ್ದ. ಈತನ ಬಂಧನದಿಂದ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಮೂರು ಮನೆ ಕಳವು ಪ್ರಕರಣಗಳು ಪತ್ತೆಯಾಗಿವೆ.
ಆರೋಪಿ ಮಹಮ್ಮದ್ ಹಫೀಜ್ ದುಶ್ಚಟದ ದಾಸನಾಗಿದ್ದು, ನಗರದ ವಿವಿಧೆಡೆ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಬೀಗ ಮುರಿದು ನುಗ್ಗಿ ನಗದು, ಚಿನ್ನಾಭರಣ ದೋಚುತ್ತಿದ್ದನು. ಕದ್ದ ಮಾಲುಗಳನ್ನು ವಿಲೇವಾರಿ ಮಾಡಿ ಬಂದ ಹಣದಿಂದ ಮೋಜು-ಮಸ್ತಿ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೈಕ್ ಕಳವು ಮಾಡುತ್ತಿದ್ದ ಮೂವರ ಬಂಧನ:ದ್ವಿಚಕ್ರ ವಾಹನಗಳ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ಮೂಲದ ಮೊಹಮ್ಮದ್ ಆಸೀಪ್ (27), ಮೊಹಮ್ಮದ್ ವಾಸೀಂ(22), ಸೈಯದ್ ಆಸೀಫ್(25) ಬಂಧಿತ ಆರೋಪಿಗಳು. ಇವರಿಂದ 22.30 ಲಕ್ಷ ರೂ. ಮೌಲ್ಯದ 31 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮುಳಬಾಗಿಲಿನಿಂದ ಬಸ್‌ನಲ್ಲಿ ಬೆಂಗಳೂರಿಗೆ ಬಂದು, ಮೆಜೆಸ್ಟಿಕ್, ಕಾಟನ್‌ಪೇಟೆ, ಕಲಾಸಿಪಾಳ್ಯ, ಸಿಟಿ ಮಾರುಕಟ್ಟೆ, ಚಾಮರಾಜಪೇಟೆ, ಹೆಬ್ಬಾಳ ಹಾಗೂ ಇತರೆ ಪ್ರದೇಶಗಳಲ್ಲಿ ನಿಲುಗಡೆ ಮಾಡುತ್ತಿದ್ದ ಬೈಕ್‌ಗಳ ಹ್ಯಾಂಡಲ್ ಲಾಕ್ ಮುರಿದು ಆರೋಪಿಗಳು ಕಳವು ಮಾಡುತ್ತಿದ್ದರು. ಬಳಿಕ ಬೈಕ್‌ಗಳನ್ನು ಕೋಲಾರಕ್ಕೆ ಕದ್ದೊಯ್ದು ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ: ನಾಲ್ವರು ವಿದೇಶಿ ಕಳ್ಳರ ಬಂಧನ