ಬೆಂಗಳೂರು:ದಲಿತ ಪರ ಹೋರಾಟದಲ್ಲಿ ತೊಡಗಿರುವ ನಾಲ್ವರು ಪ್ರಮುಖ ನಾಯಕರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸುದಾಂ ದಾಸ್, ಡಾ.ಗೋಪಾಲ್, ಅಂಬಣ್ಣ, ಹೆಣ್ಣೂರು ಶ್ರೀನಿವಾಸ್ ಅವರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪಕ್ಷಕ್ಕೆ ಬರಮಾಡಿಕೊಂಡರು.
ನಂತರ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದವರನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳುವ ಕಾರ್ಯವನ್ನು ಕಾಂಗ್ರೆಸ್ ಮಾಡಿದೆ. ಇವರ ಹಕ್ಕಿಗಾಗಿ ನಾವು ನಿರಂತರವಾಗಿ ಹೋರಾಡುತ್ತಾ ಬಂದಿದ್ದೇವೆ. ನಮ್ಮ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷದಿಂದ ಹೊರಗಿರುವ ಇತರೆ ರಾಜಕೀಯ ನಾಯಕರು ವಿಮರ್ಶಿಸುವ ಕಾರ್ಯ ಮಾಡಿದ್ದಾರೆ. ನಾವು ನಡೆದುಕೊಂಡು ಹೋಗುತ್ತಿರುವ ಹಾದಿ ಸರಿಯಾಗಿಲ್ಲ ಎಂದು ದೂರಿದ್ದಾರೆ. ಆದರೆ ನಾವು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಾಕಷ್ಟು ಅನುಕೂಲ ಬಂದಿದ್ದೇವೆ ಎಂದು ಹೇಳಿದರು.
ಬೊಮ್ಮಾಯಿ ಸರ್ಕಾರ ದಲಿತರಿಗೆ ಮೋಸ ಮಾಡಿದೆ. ಸದನದಲ್ಲಿಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡುವುದಾಗಿ ಘೋಷಿಸಿದೆ. ಆದರೆ ಇದೀಗ ಮೀಸಲಾತಿ ಪ್ರಮಾಣ ಹೆಚ್ಚಿಸುವ ವಿಚಾರ ಕುರಿತು ಕರ್ನಾಟಕದಿಂದ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ಸಂಸತ್ನಲ್ಲಿಯೇ ಕೇಂದ್ರ ಸಚಿವರು ಹೇಳಿದ್ದಾರೆ. ಇಂಥದೊಂದು ದೊಡ್ಡ ಮೋಸಕ್ಕೆ ನಾವು ದನಿ ಎತ್ತಬೇಕು. ಸಂವಿಧಾನದ 9ನೇ ಶೆಡ್ಯೂಲ್ಗೆ ಈ ವಿಚಾರವನ್ನು ಸೇರಿಸುವಂತೆ ನಾವು ಒತ್ತಾಯ ಮಾಡಿದ್ದೆವು. ಆದರೆ ಕರ್ನಾಟಕ ಸರ್ಕಾರ ಈ ಕಾರ್ಯವನ್ನು ಮಾಡುವಲ್ಲಿ ವಿಫಲವಾಗಿದೆ.
ಬೊಮ್ಮಾಯಿ ರಾಜೀನಾಮೆ ನೀಡಲಿ: ಕನಿಷ್ಠ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸದೆ ಒಂದು ಸಮುದಾಯಕ್ಕೆ ದೊಡ್ಡ ಮೋಸ ಮಾಡಿದೆ. ಶೇ.50 ರಿಂದ ಶೇ.56 ಕ್ಕೆ ಮೀಸಲಾತಿ ಹೆಚ್ಚಿಸುವ ಕಾರ್ಯ ಆಗಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ದಲಿತ ಸಮುದಾಯಕ್ಕೆ ಮೋಸ ಮಾಡಿದ್ದಾರೆ. ಇದಕ್ಕೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬೊಮ್ಮಾಯಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜ್ಯದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾಗಿರುವ ನಾಲ್ವರು ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತೇವೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದ ಬಿಜೆಪಿಯ ಸಚಿವರು, ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆಕೊಟ್ಟರು.