ಬೆಂಗಳೂರು :ಸೈಬರ್ ಅಪರಾಧ ಪ್ರಕರಣವೊಂದರ ಶಂಕಿತ ಆರೋಪಿಗಳಿಂದ 3.90 ಲಕ್ಷ ರೂ. ಹಣ ಲಂಚ ಪಡೆದ ಆರೋಪದ ಮೇಲೆ ಕೇರಳ ಪೊಲೀಸರಿಂದ ವಿಚಾರಣೆಗೊಳಗಾಗಿದ್ದ ನಗರದ ವೈಟ್ ಫೀಲ್ಡ್ ಸಿಇಎನ್ ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇನ್ಸ್‌ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್ಟೆಬಲ್ಗಳಾದ ಶಿವಣ್ಣ, ವಿಜಯ್ ಕುಮಾರ್ ಹಾಗೂ ಕಾನ್ಸ್‌ಟೇಬಲ್ ಸಂದೇಶ್ ಅವರನ್ನು ಅಮಾನತು ಮಾಡಲಾಗಿದೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್. ಗಿರೀಶ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:ಉದ್ಯೋಗದ ಹೆಸರಿನಲ್ಲಿ 26 ಲಕ್ಷ ರೂಪಾಯಿ ವಂಚಿಸಲಾಗಿದೆ ಎಂದು ಶ್ರೀಕಾಂತ್ ಎಂಬುವರು ಜೂನ್ 16ರಂದು ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಡಿಕೇರಿ ಮೂಲದ ಐಸಾಕ್ ಎಂಬಾತನ ಖಾತೆಗೆ ತನಿಖೆಯ ವೇಳೆ 10,000 ರೂ. ವರ್ಗಾವಣೆ ಆಗಿರುವುದು ತನಿಖೆ ವೇಳೆ ಪತ್ತೆಯಾಗಿತ್ತು. ಐಸಾಕ್ ವಿಚಾರಣೆ ವೇಳೆ ಬ್ಯಾಂಕ್ ಖಾತೆಯನ್ನು ರಾಜೇಶ್ ಎಂಬಾತನ ಪರವಾಗಿ ತೆರೆಯಲಾಗಿದೆ ಎಂಬುದನ್ನು ಅರಿತ ಪೊಲೀಸರು ಆತನ ವಿಚಾರಣೆ ನಡೆಸಿದ್ದರು.
ಕೇರಳ ಮೂಲದ ಪರೇಶ್ ಹಾಗೂ ನಿಶಾಂತ್ ಎಂಬಾತನ ಸೂಚನೆಯಂತೆ ಖಾತೆ ತೆರೆಯಲಾಗಿದೆ ಎಂದು ರಾಜೇಶ್ ತಿಳಿಸಿದ್ದ. ಅದರಂತೆ ಪರೇಶ್ ಹಾಗೂ ನಿಶಾಂತ್ನನ್ನ ವಿಚಾರಿಸಿದಾಗ, ವಂಚನೆಯ ಸೂತ್ರಧಾರ ಮಣಪ್ಪುರಂ ಮೂಲದ ನೌಶಾದ್ ಎಂಬುದು ತಿಳಿದು ಬಂದಿತ್ತು. ಜುಲೈ 31ರಂದು ವೈಟ್ ಫೀಲ್ಡ್ ಸಿಇಎನ್ ಠಾಣೆ ಇನ್ಸ್‌ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್ಟೇಬಲ್ಗಳಾದ ವಿಜಯ್ ಕುಮಾರ್, ಶಿವಾನಿ, ಕಾನ್ಸ್‌ಟೇಬಲ್ ಸಂದೇಶ್ ನೇತೃತ್ವದ ತಂಡ ಕೇರಳಕ್ಕೆ ತೆರಳಿತ್ತು.