ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಅಖಾಡಕ್ಕೆ ಭರ್ಜರಿ ತಾಲೀಮು ಆರಂಭಿಸಿರುವ ರಾಜ್ಯ ಬಿಜೆಪಿ ನಾಯಕರು ಟಿಕೆಟ್ ಹಂಚಿಕೆ ವಿಚಾರದಲ್ಲಿ ನಾಲ್ಕು ಸ್ತರದ ಆಯ್ಕೆ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಈ ಕುರಿತು ರಾಜ್ಯದ ಕೋರ್ ಕಮಿಟಿ ಮಹತ್ವದ ನಿರ್ಧಾರ ಕೈಗೊಂಡಿದೆ. ಅಲ್ಲದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವ ನಿರ್ಧಾರ ಕೈಗೊಂಡಿದೆ.
ನಾಲ್ಕು ಸ್ತರದ ಪ್ರಕ್ರಿಯೆ: ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಷಯದ ಮಾನದಂಡದ ಪ್ರಸ್ತಾಪವಾಯಿತು. ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಅಂತಿಮವಾಗಿ ಅಭ್ಯರ್ಥಿಗಳ ಆಯ್ಕೆಗೆ ನಾಲ್ಕು ಸ್ತರದ ಪ್ರಕ್ರಿಯೆ ನಿಗದಿಪಡಿಸಲಾಯಿತು. ತಾಲೂಕು ಘಟಕದಿಂದ ಜಿಲ್ಲಾ ಘಟಕಕ್ಕೆ ಸಂಭಾವ್ಯರ ಹೆಸರು ಕಳುಹಿಸಬೇಕು. ಕನಿಷ್ಠ ಮೂರು ಹೆಸರು ಇರುವಂತೆ ಸಂಭಾವ್ಯರ ಹೆಸರು ಕಳುಹಿಸಬೇಕು. ಶಾಸಕರು ಇರುವ ಕ್ಷೇತ್ರಗಳಲ್ಲಿಯೂ ಕೂಡಾ ಶಾಸಕರ ಹೆಸರು ಸೇರಿದಂತೆ ಸಂಭಾವ್ಯರ ಮೂರು ಹೆಸರನ್ನು ಜಿಲ್ಲಾ ಘಟಕದಿಂದ ರಾಜ್ಯ ಘಟಕಕ್ಕೆ ಕಳುಹಿಸಬೇಕು. ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಈ ಪಟ್ಟಿಗಳನ್ನು ಚರ್ಚಿಸಿ ಪರಿಶೀಲಿಸಿ ಬಳಿಕ ಕೇಂದ್ರೀಯ ಚುನಾವಣಾ ಸಮಿತಿಗೆ ಕಳುಹಿಸಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಗಿದೆ.
4 ರೀತಿಯ ಸರ್ವೇ ರಿಪೋರ್ಟ್ ಬಗ್ಗೆ ಚರ್ಚೆ:ಕ್ಷೇತ್ರವಾರು ಬಿಜೆಪಿ ಸಾಮರ್ಥ್ಯದ ಆಧಾರದಲ್ಲಿ, ಎ, ಬಿ, ಸಿ ಮತ್ತು ಡಿ ಎಂದು ವಿಂಗಡಿಸಿ ಚರ್ಚೆ ನಡೆಸಲಾಯಿತು. ಎ-ಕ್ಷೇತ್ರಗಳು ಖಚಿತ ಗೆಲುವು ಪಡೆಯುವ ಕ್ಷೇತ್ರಗಳಾಗಿದ್ದು, ಇದರಲ್ಲಿ 60-62 ಕ್ಷೇತ್ರಗಳು ಬರಲಿವೆ. ಬಿ-ಕ್ಷೇತ್ರಗಳು ಗೆಲುವಿನ ಸಾಧ್ಯತೆ ಇರುವ ಕ್ಷೇತ್ರಗಳಾಗಿದ್ದು, ಇದರಲ್ಲಿ 20-25 ಕ್ಷೇತ್ರಗಳು ಬರಲಿವೆ. ಸಿ ಮತ್ತು ಡಿ ಕ್ಷೇತ್ರಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಗೆಲ್ಲಬಹುದಾದ ಕ್ಷೇತ್ರಗಳಾಗಿದ್ದು, ಈ ಕ್ಷೇತ್ರಗಳ ಕಡೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಿ ಮತ್ತು ಡಿ ಕ್ಷೇತ್ರಗಳಲ್ಲಿ ಟಾರ್ಗೆಟ್ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.