ಬೆಂಗಳೂರು: ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ವಿಮಾ ಯೋಜನೆ ಜನರಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಹೆಲ್ತ್ ಕಾರ್ಡ್ಗೆ ಹೊಸ ರೂಪ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.
ರಾಜಸ್ಥಾನ ಹಾಗೂ ತಮಿಳುನಾಡು ರಾಜ್ಯಗಳಲ್ಲಿರುವ ಮಾದರಿಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಸಿಎಂ ಸೂಚನೆ ಮೇರೆಗೆ ಆರೋಗ್ಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತಜ್ಞರ ತಂಡ ರಚಿಸಿ ರಾಜಸ್ಥಾನ ಹಾಗೂ ತಮಿಳುನಾಡಿನಲ್ಲಿ ಆರೋಗ್ಯ ವಿಮೆ ಮಾದರಿ ಅಧ್ಯಯನ ಮಾಡಿ ವರದಿ ಸಲ್ಲಿಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರು ನಾಲ್ವರು ಅಧಿಕಾರಿಗಳನ್ನು ನಾಮನಿರ್ದೇಶನ ಮಾಡಿದ್ದು, ಜುಲೈ 10 ರೊಳಗೆ ಅಧ್ಯಯನದ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.
ಇದನ್ನೂ ಓದಿ: ನೀವು 'ಆರೋಗ್ಯ ವಿಮೆ' ತೆಗೆದುಕೊಳ್ಳಲು ಬಯಸುವಿರಾ?: ಈ ಸಲಹೆಗಳನ್ನು ನೆನಪಿಡಿ
ಮೆಡಿಕಲ್ ಜಂಟಿ ನಿರ್ದೇಶಕಿ ಡಾ. ಭಾನುಮೂರ್ತಿ, ಎಮ್.ಎಮ್ ನಿರ್ದೇಶಕ ಡಾ. ಸುರೇಶ್ ಶಾಸ್ತ್ರಿ, ಎಂ.ಎಸ್ ರೂಪಾ, ಹಣಕಾಸು ವಿಭಾಗದ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಟಿ ಅವರ ಹೆಸರುಗಳನ್ನು ಅಧ್ಯಯನ ತಂಡಕ್ಕೆ ನಾಮನಿರ್ದೇಶನ ಮಾಡಲಾಗಿದೆ. ಈ ಅಧಿಕಾರಿಗಳ ತಂಡವು ಇದೇ ತಿಂಗಳ 27, 28 ರಂದು ರಾಜಸ್ಥಾನಕ್ಕೆ ಭೇಟಿ ನೀಡಲಿದ್ದು, ಜುಲೈ 6 ಮತ್ತು 7 ರಂದು ತಮಿಳುನಾಡಿಗೆ ಭೇಟಿ ನೀಡಿ ಅಲ್ಲಿಯ ಆರೋಗ್ಯ ವಿಮಾ ಮಾದರಿಯ ಕುರಿತು ಅಧ್ಯಯನ ನಡೆಸಲಿದೆ. ಜುಲೈ 10 ರಂದು ರಾಜ್ಯ ಸರ್ಕಾರಕ್ಕೆ ಅಧ್ಯಯನ ವರದಿ ಸಲ್ಲಿಸಲಿದೆ.