ಬೆಂಗಳೂರು: ಭಾರತದಲ್ಲಿ ಜೆಎಂಬಿ (ಜಮಾತ್ ಉಲ್ ಬಾಂಗ್ಲಾ) ಸಂಘಟನೆಯ ಚಟುವಟಿಕೆಗಳನ್ನ ಹೆಚ್ಚಿಸಲು ಹಣ ಹೊಂದಿಸುವ ಉದ್ದೇಶದಿಂದ ಬೆಂಗಳೂರಿನ ಹೊರವಲಯದಲ್ಲಿ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳಿಗೆ 7 ವರ್ಷ ಶಿಕ್ಷೆ ಪ್ರಕಟವಾಗಿದೆ. ಕಡೋರ್ ಖಾಜಿ, ಮುಸ್ತಫಿಜುರ್ ರೆಹಮಾನ್, ಆದಿಲ್ ಶೇಕ್ ಹಾಗೂ ಅಬ್ದುಲ್ ಕರೀಂ ಎಂಬ ಆರೋಪಿಗಳು ದೋಷಿಗಳೆಂದು ಘೋಷಿಸಿರುವ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ 7 ವರ್ಷ ಸಜೆ ವಿಧಿಸಿ ಆದೇಶ ಪ್ರಕಟಿಸಿದೆ.
ಪ್ರಕರಣದ ಹಿನ್ನೆಲೆ: 2014ರ ಬುರ್ದ್ವಾನ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಹಬೀಬುರ್ ರೆಹಮಾನ್ ಎಂಬಾತನನ್ನ ಸ್ಫೋಟಕ ಸಾಮಗ್ರಿಗಳು, ಟೈಮರ್, ಗ್ರೆನೇಡ್ ಸಹಿತ ಜುಲೈ 2019ರಲ್ಲಿ ಎನ್ಐಎ ತಂಡ ಬೆಂಗಳೂರಿನಲ್ಲಿ ಬಂಧಿಸಿತ್ತು. ತನಿಖೆ ವೇಳೆ ಹಬೀಬುರ್ ರೆಹಮಾನ್, 'ಬೆಂಗಳೂರಿನ ಚಿಕ್ಕಬಾಣಾವರದಲ್ಲಿ ತನ್ನ ಬೆಂಬಲಿಗರು ನೆಲೆಸಿದ್ದು, ಎರಡು ಬಾರಿ ತಾನು ಭೇಟಿ ನೀಡಿರುವುದನ್ನ' ಬಾಯ್ಬಿಟ್ಟಿದ್ದ. ತಕ್ಷಣ ಸೋಲದೇವನಹಳ್ಳಿ ಪೊಲೀಸರ ಸಹಕಾರದೊಂದಿಗೆ ಚಿಕ್ಕಬಾಣಾವರದ ಮನೆ ಮೇಲೆ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು ಆರು ಜನ ಆರೋಪಿಗಳನ್ನು ಬಂಧಿಸಿದ್ದರು.
ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದ ಎನ್ಐಎ: ವಿಚಾರಣೆ ವೇಳೆ ಆರೋಪಿಗಳು ಮತ್ತು ಅವರ ಸಹಚರರು ಭಾರತದಲ್ಲಿ ಜೆಎಂಬಿ ಸಂಘಟನೆಯ ಕಾರ್ಯ ಚಟುವಟಿಕೆಗಳನ್ನ ವಿಸ್ತರಿಸಲು ಹಣ ಹೊಂದಿಸುವ ಸಲುವಾಗ ಕೆ.ಆರ್.ಪುರಂ, ಕೊತ್ತನೂರು, ಅತ್ತಿಬೆಲೆ ಠಾಣಾ ವ್ಯಾಪ್ತಿಗಳಲ್ಲಿ ದರೋಡೆಯಲ್ಲಿ ಭಾಗಿಯಾಗಿರುವುದು ಮತ್ತು ಅದೇ ಹಣದಿಂದ ಸ್ಪೋಟಕಗಳ ಸಂಗ್ರಹಣೆ ಮಾಡಿರುವುದು ಬಯಲಾಗಿತ್ತು. ಬಳಿಕ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಎನ್ಐಎ ದೋಷಾರೋಪಣೆ ಪಟ್ಟಿ ಸಲ್ಲಿಸಿತ್ತು. ಸದ್ಯ ಈ ಪ್ರಕರಣದಲ್ಲಿ ಒಟ್ಟು 11 ಆರೋಪಿಗಳನ್ನ ಎನ್ಐಎ ಬಂಧಿಸಿದ್ದು, 7 ಜನ ಆರೋಪಿಗಳಿಗೆ ಶಿಕ್ಷೆ ಪ್ರಕಟವಾದಂತಾಗಿದೆ.