ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರಮುಖ ನಾಲ್ಕು ಕೆರೆಗಳನ್ನು ಒತ್ತುವರಿ ಮಾಡಿರುವವರು ಹಾಗೂ ಅವರ ಈ ಕಾರ್ಯಕ್ಕೆ ಕುಮಕ್ಕು ನೀಡಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಈ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆದಿದ್ದು,
ಬೆಂಗಳೂರು ನಗರ ಮತ್ತು ನಗರ ಜಿಲ್ಲಾ ವ್ಯಾಪ್ತಿಯಲ್ಲಿರುವ ಹತ್ತಾರು ಐತಿಹಾಸಿಕ ಕೆರೆಗಳಿಗೆ ಎ.ಟಿ.ರಾಮಸ್ವಾಮಿ ಹಾಗೂ ಕೋಳಿವಾಡ ಸಮಿತಿ ಪರಿಶೀಲನೆ ನಡೆಸಿ ವರದಿ ನೀಡಿದೆ. ಆದರೆ, ಕೆಲ ಅಧಿಕಾರಿಗಳು ಸಮಿತಿಗೆ ಉದ್ದೇಶಪೂರ್ವಕವಾಗಿಯೇ ಕೆಲ ಕೆರೆಗಳ ಮಾಹಿತಿ ನೀಡದೇ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎನ್.ಆರ್.ರಮೇಶ್ ಒತ್ತಾಯ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಯಲಹಂಕ ಹೋಬಳಿಯಲ್ಲಿರುವ ಸಿಂಗಾಪುರಕೆರೆ, ಅಬ್ಬಿಗೆರೆ ಕೆರೆ, ಚಿಕ್ಕಬಾಣವಾರ ಹಾಗೂ ಹೆಬ್ಬಾಳ ಕೆರೆಗಳ ಬಗ್ಗೆ ಉದ್ದೇಶಪೂರ್ವಕವಾಗಿಯೇ ಮಾಹಿತಿ ನೀಡದೇ ಭೂಗಳ್ಳರಿಗೆ ಸಹಕರಿಸಲಾಗಿದೆ ಎಂಬ ಆಘಾತಕಾರಿ ಅಂಶವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮುಖ್ಯವಾಗಿ ಬ್ಯಾಟರಾಯನಪುರ ಕೆರೆಗಳ ಒತ್ತುವರಿ:ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಯಲಹಂಕ ಹೋಬಳಿಯ ಸರ್ವೆ ನಂಬರ್ 102 ರ ಸುಮಾರು 66.18 ಎಕರೆಗಳಷ್ಟು ವಿಸ್ತೀರ್ಣದ ಸಿಂಗಾಪುರ ಕೆರೆ ಸಂಪೂರ್ಣವಾಗಿ ಭೂಗಳ್ಳರಿಂದ ಕಬಳಿಸಲ್ಪಟ್ಟು, ಅಕ್ರಮ ಬಡಾವಣೆಗಳು ನಿರ್ಮಾಣಗೊಂಡಿರುತ್ತವೆ. ಹಾಗೇ, ಸಿಂಗಾಪುರ ಕೆರೆಯನ್ನು 1,528 ರಲ್ಲಿ ನಾಲಪ್ಪ ನಾಯಕನು ನಿರ್ಮಿಸಿರುವ ಬಗ್ಗೆ ಸ್ಥಳದಲ್ಲಿ ಇರುವ ಶಾಸನವು ಇಂದಿಗೂ ಸಾರಿ ಹೇಳುತ್ತದೆ ಎಂದಿದ್ದಾರೆ.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಯಲಹಂಕ ಹೋಬಳಿ ಸಿಂಗಾಪುರ ಗ್ರಾಮದ ಅಬ್ಬಿಗೆರೆ ಕೆರೆಯು ಸುಮಾರು 75 ಎಕರೆಗಳಿಗೂ ಹೆಚ್ಚು ವಿಸ್ತೀರ್ಣವಿದ್ದು, ಸಂಪೂರ್ಣ ಕೆರೆಯು ಒತ್ತುವರಿಯಾಗಿ ವಿನಾಯಕ ನಗರ ಎಂಬ ಬಡಾವಣೆಯೂ ಸಹ ತಲೆ ಎತ್ತಿರುತ್ತದೆ.
ಹೀಗೆ, ಬೆಂಗಳೂರು ಉತ್ತರ ತಾಲ್ಲೂಕಿನ ಚಿಕ್ಕಬಾಣಾವರ ಕೆರೆ, ಹೆಬ್ಬಾಳ ಕೆರೆಯೂ ಒತ್ತುವರಿ ಆಗಿದ್ದು ಒಟ್ಟು ನಾಲ್ಕು ಐತಿಹಾಸಿಕ ಕೆರೆಗಳ ಸರ್ವೆ ಕಾರ್ಯ ನಡೆಸಬೇಕೆಂದು ಮತ್ತು ಹಳೆಯ ದಾಖಲೆಗಳನ್ನು ಪರಿಶೀಲಿಸಿ ಒತ್ತುವರಿದಾರರ ಮತ್ತು ಅಮೂಲ್ಯ ಕೆರೆಗಳ ಪ್ರದೇಶಗಳನ್ನು ಒತ್ತುವರಿ ಮಾಡಿ ಕಬಳಿಕೆ ಮಾಡಲು ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಸರ್ಕಾರಿ ಜಮೀನು ಒತ್ತುವರಿ, ಕಟ್ಟಡ ನಿರ್ಮಾಣ.. ಅಧಿಕಾರಿಗಳ ವಿರುದ್ಧ ತನಿಖೆಗೆ ಹೈಕೋರ್ಟ್ ಸೂಚನೆ