ಬೆಂಗಳೂರು: ಹಗಲು ರಸ್ತೆಗಳಲ್ಲಿ ತಿರುಗಿ ದರೋಡೆಗೆ ಸಂಚು ರೂಪಿಸಿ ರಾತ್ರಿ ಕಾರ್ಯೋನ್ಮುಖರಾಗುತ್ತಿದ್ದ ನಾಲ್ವರು ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಉತ್ತರ ವಿಭಾಗದ ಆರ್ಟಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಶೇಕ್ ಅಬ್ರಾರ್, ಸೈಫ್ ವುಲ್ಲಾ ಭಾಷಾ, ಮುಫೀದ್ ವುಲ್ಲಾ ಖಾನ್, ಅತೀಕ್ ಹುಸೇನ್ ಬಂಧಿತ ಆರೋಪಿಗಳು. ಪೊಲೀಸರು ಇಂದು ಗಸ್ತಿನಲ್ಲಿ ತಿರುಗುತ್ತಿರುವಾಗ. ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೇಕ್ ಪ್ಯಾಲೇಸ್ ಮುಂಭಾಗ ಪೊಲೀಸರನ್ನು ಕಂಡು 5-6 ಮಂದಿ ಓಡಾಲಾರಂಭಿಸಿದ್ದಾರೆ. ಆಗ ಅನುಮಾನ ಬಂದ ಪೊಲೀಸರು ಆರೋಪಿಗಳ ಬೆನ್ನತ್ತಿ ಹಿಡಿದು ವಿಚಾರಣೆ ನಡೆಸಿದಾಗ ಮಾರಕಾಸ್ತ್ರಗಳಿಂದ ಬೆದರಿಸಿ, ದರೋಡೆಗೆ ಯೋಜನೆ ರೂಪಿಸಿದ್ದಾಗಿ ಬಾಯ್ಬಿಟ್ಟಿದ್ದಾರೆ.
ಇನ್ನು ಆರೋಪಿಗಳ ಪೈಕಿ ಶೇಕ್ ಅಬ್ರಾರ್ ಬೆಂಗಳೂರಿನ ಮೆಡಿಕಲ್ಸ್ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, 2018ರಲ್ಲಿ ಯಶವಂತಪುರ ಪೊಲೀಸ್ ಠಾಣೆಯ ದರೋಡೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದಿದ್ದ. ಇನ್ನೊಬ್ಬ ಸೈಫುಲ್ಲಾ ಖಾನ್, ಈತ ಆಂಧ್ರಪ್ರದೇಶದ ಪೂಂಗನೂರಿನಲ್ಲಿ ಚಿಕನ್ ಅಂಗಡಿ ಇಟ್ಟು ಕೊಂಡಿದ್ದು, ಶೇಕ್ ಅಬ್ರಾರ್ ನ ಜೊತೆ ಸೇರಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಆಂದ್ರಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದ. ಮತ್ತೊಬ್ಬ ಮುಫೀಧ್ ವುಲ್ಲಾಖಾನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ಶೇಕ್ ಅಬ್ರಾರ್ ಮತ್ತು ಸೈಫುವುಲ್ಲಾ ಖಾನ್ಗೆ ಆಶ್ರಯ ನೀಡಿದ್ದ. ಜೊತೆಗೆ ಕಳ್ಳತನ ಮಾಡಿದ್ದ ದ್ವಿಚಕ್ರ ವಾಹನಗಳಿಗೆ ಆಂಧ್ರ ಪ್ರದೇಶದ ನಂಬರ್ ಫ್ಲೇಟ್ ಹಾಕುತ್ತಿದ್ದ. ಅತೀಕ್ ಹುಸೇನ್ ಬೆಂಗಳೂರುನವನೇ ಆಗಿದ್ದು, ಆರೋಪಿಗಳಿಗೆ ದ್ವಿಚಕ್ರವಾಹನಗಳನ್ನು ಕಳವು ಮಾಡಲು ಸ್ಥಳೀಯ ಪ್ರದೇಶವನ್ನು ತೋರಿಸಿಕೊಡುತ್ತಿದ್ದ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ.
ಸದ್ಯ ಆರೋಪಿಗಳ ಮೇಲೆ ಆರ್ ಟಿ ನಗರ ಠಾಣೆಯಲ್ಲಿ 6 ಪ್ರಕರಣ, ಕೆ. ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ 6 ಪ್ರಕರಣ ಸೇರಿದಂತೆ ಹಲವಾರು ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಬಂಧಿತ ಆರೋಪಿಗಳಿಂದ 28.3 ಲಕ್ಷ ಮೌಲ್ಯದ 10 ರಾಯಲ್ ಎನ್ಫೀಲ್ಡ್, 3 ಪಲ್ಸರ್, 1 ಟಿ. ವಿ. ಎಸ್, 6 ಹೋಂಡಾ ಆ್ಯಕ್ಟಿವಾ ವಶ ಪಡಿಸಿಕೊಂಡು ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ.