ಬೆಂಗಳೂರು:ನಗರದಲ್ಲಿ ರೆಮ್ಡೆಸಿವಿರ್ ಇಂಜೆಕ್ಷನ್ ಅನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿರುವುದಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವೈದ್ಯರೊಬ್ಬರು ವಿಡಿಯೋ ಹರಿಬಿಟ್ಟ ಬೆನ್ನಲ್ಲೇ ಸಂಜಯ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕಾತ್ಯಾಯಿನಿ ಹಾಗೂ ಮೂವರು ಸಿಬ್ಬಂದಿಯನ್ನು ಎತ್ತಂಗಡಿ ಮಾಡಲಾಗಿದೆ.
ಪ್ರಕರಣ ತನಿಖೆ ಮುಗಿಯುವವರೆಗೂ ತಮ್ಮ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ತಾಕೀತು ಮಾಡಿರುವ ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ, ಪ್ರಕರಣ ತನಿಖೆಯನ್ನು ಜೆ. ಸಿ. ನಗರ ಎಸಿಪಿ ರೀನಾ ಸುವರ್ಣ ಹೆಗಲಿಗೆ ಜವಾಬ್ದಾರಿ ವಹಿಸಿದ್ದಾರೆ.
ನಗರದಲ್ಲಿ ರೆಮ್ಡೆಸಿವಿರ್ ಅಕ್ರಮ ಹಾಗೂ ನಕಲಿ ಮಾರಾಟ ಪ್ರಕರಣದಲ್ಲಿ ನಾಲ್ಕು ದಿನಗಳ ಹಿಂದೆ ವೈದ್ಯ ಸೇರಿ ನಾಲ್ವರನ್ನು ಸಂಜಯ ನಗರ ಪೊಲೀಸರು ಬಂಧಿಸಿ ಅಕ್ರಮ ಜಾಲವನ್ನು ಬಯಲಿಗೆಳೆದಿದ್ದರು. ಪ್ರಕರಣ ಸಂಬಂಧ ಕೆಲ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಿ ಕೆಲ ವೈದ್ಯರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಇದೇ ಪ್ರಕರಣದಲ್ಲಿ ಡಾ. ನಾಗರಾಜ್ ಎಂಬುವರನ್ನು ಠಾಣೆಗೆ ಕರೆಯಿಸಿದ ಪೊಲೀಸರು ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ನೀಡಿದ್ದಾರೆ. ಅಲ್ಲದೆ ಐದೂವರೆ ಲಕ್ಷ ರೂ. ನೀಡುವಂತೆ ಒತ್ತಡ ಹಾಕಿದ್ದಾರೆ ಎಂದು ವೈದ್ಯರು ಆರೋಪಿಸಿದ್ದರು.
ಬಾಸುಂಡೆ ಬರುವ ಹಾಗೆ ಹಲ್ಲೆ ನಡೆಸಿರುವ ಪೊಲೀಸರ ವಿರುದ್ಧ ವೈದ್ಯರ ತಂಡ ದೂರು ನೀಡಿದ ಬೆನ್ನಲೇ ಇನ್ಸ್ಪೆಕ್ಟರ್ ಕಾತ್ಯಾಯಿನಿ ಸೇರಿ ನಾಲ್ವರನ್ನು ಡಿಸಿಪಿ ಎತ್ತಂಗಡಿ ಮಾಡಿದ್ದಾರೆ.
ರೆಮ್ಡೆಸಿವಿರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಹೊರಿಸಿ ಶ್ರೀ ಸಾಯಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ನಾಗರಾಜ್ ಅವರನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೂ ನನಗೂ ಸಂಬಂಧವಿಲ್ಲ. ಅದರೂ ಕೂಡ ನನ್ನನ್ನು ಸಿಕ್ಕಾಪಟ್ಟೆ ಪೊಲೀಸರು ಹೊಡೆದಿದ್ದಾರೆ. ಇದೇ ತಿಂಗಳ 15 ರಂದು ನನ್ನನ್ನು ಸ್ಟೇಷನ್ಗೆ ಕರೆದುಕೊಂಡು ಹೋಗಿ ನಿನ್ನೆ ಬಿಟ್ಟಿದ್ದಾರೆ. ರೆಮ್ಡೆಸಿವಿರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಸುಖಾಸುಮ್ಮನೆ ನನ್ನನ್ನು ಕರೆಯಿಸಿ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರ ವಿರುದ್ಧ ಆಪಾದಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಸಂಜಯ ನಗರ ಠಾಣೆಯ ಇನ್ಸ್ಪೆಕ್ಟರ್ ಕಾತ್ಯಾಯಿನಿ ನಕಲಿ ರೆಮ್ಡಿಸಿವಿರ್ ಜಾಲದಲ್ಲಿ ಈಗಾಗಲೇ ಕೆಲ ಆಸ್ಪತ್ರೆಯ ವೈದ್ಯರಿಗೆ ನೋಟಿಸ್ ನೀಡಲಾಗಿದೆ. ಅನಾವಶ್ಯಕವಾಗಿ ಯಾರಿಗೂ ಹೊಡೆದಿಲ್ಲ. ವೈದ್ಯ ಡಾ. ನಾಗರಾಜ್ ಆರೋಪ ನಿರಾಧಾರ ಎಂದು ತಿಳಿಸಿದರು.
ಓದಿ:ವಾಯುಸೇನೆಯಿಂದ ನಿರ್ಮಿಸುತ್ತಿರುವ ಕೋವಿಡ್ ಹೆಲ್ತ್ ಸೆಂಟರ್ಗೆ ಆರೋಗ್ಯ ಸಚಿವ ಭೇಟಿ, ಪರಿಶೀಲನೆ