ಬೆಂಗಳೂರು :ಉದ್ಯಮಿಯನ್ನ ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ಗೆ ಸಿಲುಕಿಸಿ ಲಕ್ಷಾಂತರ ರೂ. ವಸೂಲಿ ಮಾಡಿದ ಆರೋಪದಡಿ ಸ್ಥಳೀಯ ಸುದ್ದಿವಾಹಿನಿ ಮಾಲೀಕ ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಿರೇಶ್ ಖಾಸಗಿ ಸುದ್ದಿವಾಹಿನಿಯೊಂದರ ಬಂಧಿತ ಮಾಲೀಕ. ಸಹಚರರಾದ ಜಾನ್ ಕೆನಡಿ, ನಿರ್ಮಲ್, ಬಾಬು ಎಂಬುವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾದ ಯುವತಿ ನಾಪತ್ತೆಯಾಗಿದ್ದಾಳೆ. ತಮಿಳುನಾಡಿನ ಮೂಲದ ಶೇಖರ್ ಎಂಬುವರು ನೀಡಿದ ದೂರಿನ ಮೇರೆಗೆ ನಾಲ್ವರನ್ನು ಬಂಧಿಸಲಾಗಿದೆ.
ಕೆಲಸದ ಸಲುವಾಗಿ 2019ರಲ್ಲಿ ಸೆಪ್ಟೆಂಬರ್ನಲ್ಲಿ ನಗರದ ಖಾಸಗಿ ಹೋಟೆಲ್ವೊಂದರಲ್ಲಿ ತಂಗಿದ್ದರು. ಈ ವೇಳೆ ಸುಕನ್ಯಾ ಎಂಬಾಕೆ ನನ್ನೊಂದಿಗೆ ಅಶ್ಲೀಲವಾಗಿ ನಡೆದುಕೊಂಡು ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿಕೊಂಡಿದ್ದಳು. ಆ ದಿನ ರಾತ್ರಿ ರೂಮಿನೊಳಗೆ ಮಲಗಿ ಮಾರನೇ ದಿನ ಎದ್ದು ಹೋಗಿದ್ದಳು.
2020ರ ಮಾರ್ಚ್ನಲ್ಲಿ ನಂದಿನಿ ಹೆಸರಿನಲ್ಲಿ ಯುವತಿ ಕರೆ ಮಾಡಿ ವಾಟ್ಸ್ಆ್ಯಪ್ನಲ್ಲಿ ಅಶ್ಲೀಲ ಚಿತ್ರ ಕಳುಹಿಸಿದ್ದಾಳೆ. ₹20 ಲಕ್ಷ ಹಣ ಕೊಡದಿದ್ದರೆ ಕುಟುಂಬದವರಿಗೆ ವಿಡಿಯೋ ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಅದೇ ರೀತಿ ಕಳೆದ ವರ್ಷ ಡಿಸೆಂಬರ್ನಲ್ಲಿಯೂ ಕರೆ ಮಾಡಿ ಬೆದರಿಸಿದ್ದಾರೆ.
ಇದಾದ ಕೆಲವೇ ದಿನಗಳಲ್ಲಿ ವಿರೇಶ್ ಮೊಬೈಲ್ ಮೂಲಕ ಪರಿಚಯ ಬೆಳಸಿಕೊಂಡು ₹80 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾರೆ ಎಂದು ಉದ್ಯಮಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಹಂತ- ಹಂತವಾಗಿ 34 ಲಕ್ಷ ರೂಪಾಯಿ ನೀಡಿರುವುದಾಗಿ ಉದ್ಯಮಿ ತಿಳಿಸಿದ್ದಾರೆ. ಬಳಿಕ ಮತ್ತೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ನಗರ ಕೇಂದ್ರ ಸಿಎಎನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಘಟನೆ ಕುರಿತು ಸಿಎಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ:ವಿಚಾರಣೆ ನೆಪದಲ್ಲಿ ಯುವಕನಿಗೆ ಥಳಿತ ಆರೋಪ: ಇಬ್ಬರು ಪಿಎಸ್ಐ ಅಮಾನತು