ಬೆಂಗಳೂರು: ಖೋಟಾನೋಟು ಮುದ್ರಿಸಿ ರಾಜಧಾನಿಯಲ್ಲಿ ಚಲಾವಣೆಗೆ ಯತ್ನಿಸುತ್ತಿದ್ದ ನಾಲ್ವರು ಅಂತಾರಾಜ್ಯ ಆರೋಪಿಗಳನ್ನ ಸುಬ್ರಮಣ್ಯಪುರ ಪೊಲೀಸರು ಬಂಧಿಸಿ 11 ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಂಧ್ರಪ್ರದೇಶದ ಕಡಪ ಜಿಲ್ಲೆಯ ಚರಣ್ ಸಿಂಗ್, ಪುಲ್ಲಲರೇವು ರಾಜ, ರಜನಿ ಹಾಗೂ ಗೋಪಿನಾಥ್ ಬಂಧಿತ ಆರೋಪಿಗಳು. ಬಂಧಿತರಿಂದ 500 ಮುಖಬೆಲೆಯ 11 ಲಕ್ಷ ರೂಪಾಯಿ ನಕಲಿ ಹಣ, ಖೋಟಾನೋಟು ಪ್ರಿಂಟ್ ಮಾಡುವ ಉಪಕರಣಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.
ಇದೇ ತಿಂಗಳು ಜನವರಿ 19 ರ ಮಧ್ಯಾಹ್ನ ಉತ್ತರಹಳ್ಳಿ ಪೂರ್ಣಪ್ರಜ್ಞಾ ಲೇಔಟ್ ಬಳಿ ನಕಲಿ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ 500 ರೂಪಾಯಿ ಮೌಲ್ಯದ 8 ಕಂತೆಗಳಲ್ಲಿ 818 ನೋಟುಗಳಿರುವ 4 ಲಕ್ಷ ಮೌಲ್ಯದ ನೋಟು ಜಪ್ತಿ ಮಾಡಿದ್ದರು. ವಿಚಾರಣೆ ವೇಳೆ ಅನಂತಪುರದಲ್ಲಿ ನೋಟು ತಯಾರಿಸುವ ಜಾಗದ ಬಗ್ಗೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ 6.25 ಲಕ್ಷ ಮೌಲ್ಯದ ನಕಲಿ ನೋಟು ಜಪ್ತಿ ಮಾಡಿಕೊಂಡಿರುವುದಾಗಿ ನಗರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಜ.19ರಂದು ಮಧ್ಯಾಹ್ನ 1.30ರ ಹೊತ್ತಿಗೆ ಉತ್ತರಹಳ್ಳಿ-ಕೆಂಗೇರಿ ಮುಖ್ಯರಸ್ತೆಯ ಪೂರ್ಣ ಪ್ರಜ್ಞಾ ಲೇಔಟ್‌ನ ಸಾಧನಾ ಕಾಲೇಜು ಹತ್ತಿರ ಬೊಲೆರೊ ಜೀಪ್‌ನಲ್ಲಿ ಚರಣ್ ಮತ್ತು ರಜಿನಿ ನಕಲಿ ನೋಟು ತಂದಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಇದರ ಆಧಾರದ ಮೇಲೆ ಮಫ್ತಿಯಲ್ಲಿದ್ದು ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಗಳು ಖೋಟಾ ನೋಟು ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ತೆರಳಿದಾಗ ಕಾರು ಬಳಿ ನಿಂತು ಚರಣ್ ಸಿಂಗ್ ನೋಟು ಮಾರಾಟ ಮಾಡುತ್ತಿರುವುದು ತಿಳಿದು ಬಂದಿತ್ತು. ಕೂಡಲೇ ಚರಣ್‌ನನ್ನು ವಶಕ್ಕೆ ಪಡೆದು ಕಾರು ಪರಿಶೀಲಿಲಿಸಿದಾಗ ಕಾರಿನೊಳಗೆ ಆರೋಪಿ ಮಹಿಳೆ ರಜನಿ ಮತ್ತು 500 ರೂ. ಮುಖಬೆಲೆಯ 8 ಬಂಡಲ್ ನೋಟುಗಳು ದೊರೆತಿದ್ದವು. ಆರೋಪಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದರು.
ಇದನ್ನೂ ಓದಿ:ಆಂಧ್ರದಿಂದ ಖೋಟಾ ನೋಟು ತಂದು ಬೆಂಗಳೂರಿನಲ್ಲಿ ಚಲಾವಣೆ ಯತ್ನ; ಮಹಿಳೆ ಸೇರಿ ಇಬ್ಬರು ಸೆರೆ