ಬೆಂಗಳೂರು: ಇಸ್ಪೀಟ್ ಆಟ ಆಡುವ ವಿಚಾರದಲ್ಲಿ ನಡೆದಿದ್ದ ಕೊಲೆ ಯತ್ನ ಪ್ರಕರಣ ಬೆನ್ನತ್ತಿದ್ದ ಸಿಸಿಬಿ ಪೊಲೀಸರು ಇತ್ತೀಚೆಗೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿಶೀಟರ್ ಸೇರಿ ನಾಲ್ವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ರಾಜಾನುಕುಂಟೆ ಪೊಲೀಸ್ ಠಾಣೆಯ ರೌಡಿಶೀಟರ್ ಹರೀಶ್, ಸಹಚರರಾದ ತಿಮ್ಮೇಗೌಡ, ಮೂರ್ತಿ ಹಾಗೂ ರಾಜು ಎಂಬುವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಇತ್ತೀಚೆಗೆ ಇಸ್ಪೀಟ್ ವಿಚಾರ ಸಂಬಂಧ ಪವನ್ ಎಂಬಾತನೊಂದಿಗೆ ಗಲಾಟೆ ಮಾಡಿಕೊಂಡು ಮಾರಕಾಸ್ತ್ರಗಳಿಂದ ಬಂಧಿತರ ಗ್ಯಾಂಗ್ ಹಲ್ಲೆ ಮಾಡಿತ್ತು. ವ್ಯವಸ್ಥಿತವಾಗಿ ಆರೋಪಿಗಳು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡಿದ್ದರು. ಅಲ್ಲದೆ, ಆರೋಪಿಗಳು ಹಣವಿರುವ ಶ್ರೀಮಂತರನ್ನು ಗುರಿಯಾಗಿಸಿಕೊಂಡು ಮಾರಕಾಸ್ತ್ರ ಇಟ್ಟುಕೊಂಡು ದರೋಡೆಗೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.