ಬೆಂಗಳೂರು: ಸಮಯ ಬಂದಾಗ ನಿಮ್ಮ ಪರವಾದ ನಿಲುವು ತೆಗೆದುಕೊಳ್ಳುವವರೇ ನಿಜವಾದ ಹಿಂದುಳಿದ ನಾಯಕರು. ರಾಜಕೀಯ ಭಾಷಣಗಳಿಂದ ಹೊಟ್ಟೆ ತುಂಬುವುದಿಲ್ಲ. 75 ವರ್ಷಗಳಿಂದ ಬರೀ ಭಾಷಣಗಳನ್ನೇ ಕೇಳಿದ್ದೇವೆ. ಸಂವಿಧಾನ ರಕ್ಷಣೆ ಅಂತಾ ಅದೇ ಸಂವಿಧಾನವನ್ನು ಉಲ್ಲಂಘನೆ ಮಾಡಿದ್ದಾರೆ. ವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡಿರೋದನ್ನು ನೋಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಮಿಕವಾಗಿ ನುಡಿದಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ಇಂದು ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿವಿಧ ಕಟ್ಟಡ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ, ವಿವಿಧ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಅವರು, ನಾವೂ ಇವತ್ತು ಫಲಾನುಭವಿಗಳಿಗೆ ವಿತರಣೆ ಮಾಡುತ್ತಿದ್ದೇವೆ. ಇದನ್ನು 75 ವರ್ಷಗಳಿಂದ ಮಾಡಿದ್ದರೆ ಇವತ್ತು ಈ ಅವಶ್ಯಕತೆ ಬರುತ್ತಿರಲಿಲ್ಲ. ಸೂರು ಸಿಕ್ಕಿದರೆ, ಸ್ವಯಂ ಉದ್ಯೋಗ ಸಿಕ್ಕಿದರೆ ಇತರಿಗೆ ಸಹಾಯ ಮಾಡಬಹುದಿತ್ತು. ಇದ್ಯಾವುದು ಅವರು ಮಾಡಲಿಲ್ಲ. ಹಿಂದುಳಿದ ಹೆಸರಲ್ಲಿ ಅವರು ಮುಂದೆ ಬಂದರು. ನಿಮ್ಮನ್ನ ಎಲ್ಲಿಟ್ರೋ ಅಲ್ಲೇ ಇಟ್ರು ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಯಾರಿಗೋಸ್ಕರ ಈ ಶಕ್ತಿ ಸೌಧ ಕಟ್ಟಿದ್ದಾರೆ. ಅವರು ಇವತ್ತು ಸರ್ಕಾರ ಮಾಡಿರುವ ಕಾರ್ಯಕ್ರಮದ ಮೂಲಕ ಸವಲತ್ತು ಪಡೆದುಕೊಳುತ್ತಿದ್ದಾರೆ. ಇದು ನಿಜಕ್ಕೂ ಪ್ರಜಾಪ್ರಭುತ್ವದ ಅರ್ಥ. ಜನರಿಂದ ಮಾಡಿರುವ ಸರ್ಕಾರ. ಬಹಳ ಉದ್ದುದ್ದ ಭಾಷಣಗಳನ್ನು ಮಾಡಿ ನಾವು ನಿಮಗೆ ಭರವಸೆಯನ್ನು ಕೊಡೋದ್ರಿಂದ ನ್ಯಾಯವನ್ನು ಒದಗಿಸಲು ಸಾಧ್ಯವಿಲ್ಲ. ಸ್ವಾಭಿಮಾನದಿಂದ ಬದಕುಲು ಸರ್ಕಾರ ಕಾರ್ಯಕ್ರಮ ಮೂಡಿಸಿದಾಗ ಮಾತ್ರ ಸಾಧ್ಯ. ನಿಮ್ಮ ಬದುಕು ಹಸನಾದಾಗ ಪ್ರಜಾಪ್ರಭುತ್ವದ ಗೆಲುವು ಆಗುತ್ತದೆ ಎಂದು ಹೇಳಿದರು.
ಸರ್ಕಾರ ಸ್ಪಂದನಾಶೀಲವಾಗಿದ್ದರೆ ನಿಮ್ಮ ಸಮಸ್ಯೆಗಳನ್ನು ಅರಿತು ಕಾರ್ಯಕ್ರಮಗಳನ್ನು ಕೊಡುತ್ತಿತ್ತು. ಗಂಗಾ ಕಲ್ಯಾಣ ಯೋಜನೆಯನ್ನು ಪಂಚವಾರ್ಷಿಕ ಯೋಜನೆಯಂತೆ ಮಾಡಿದ್ದರು. ಐದು ತಿಂಗಳಲ್ಲಿ ಆಗೋದನ್ನ ಐದು ವರ್ಷ ಮಾಡುತ್ತಿದ್ದರು. ನಾವು ನೇರವಾಗಿ ಫಲಾನುಭವಿಗಳ ಅಕೌಂಟಿಗೆ ಕೊಡೋ ಕೆಲಸ ಮಾಡಿದೆವು. ಯಾವ ಗುತ್ತಿಗೆದಾರನಿಗೆ ಸಹಾಯ ಮಾಡುವ ಕೆಲಸವನ್ನು ನಾವು ಮಾಡಿಲ್ಲ. ಒಬ್ಬ ಗುತ್ತಿಗೆದಾರ ಸಾವಿರಾರು ಜನರ ಬದುಕನ್ನು ಮುಷ್ಟಿಯಲ್ಲಿ ಇಟ್ಟಿಕೊಳ್ಳೋದು ಯಾವ ನ್ಯಾಯ?. ಅದಕ್ಕಾಗಿ ನಾವು ಮೊದಲ ಕಂತಿನ 75 ಸಾವಿರ ಹಣವನ್ನು ನೇರವಾಗಿ ಅಕೌಂಟಿಗೆ ಕೊಡುತ್ತಿದ್ದೇವೆ ಎಂದು ಸಿಎಂ ತಿಳಿಸಿದರು.
ಹಿಂದುಳಿದ ವರ್ಗಗಳ ಹೂಡಿಕೆ ಅಕ್ಷಯ ಪಾತ್ರೆಯಲ್ಲಿ ಹಣ ತೊಡಗಿಸಿದಂತೆ:ಪ್ರಧಾನಿ ನರೇಂದ್ರ ಮೋದಿಯವರು ಮಧ್ಯವರ್ತಿಗಳ ಹಾವಳಿಯನ್ನು ತೆಗೆದುಹಾಕಿ ಡಿಜಿಟಲೈಸ್ ಮಾಡಿದರು. ನೇರವಾಗಿ ರೈತರ ಅಕೌಂಟಿಗೆ ಹಣ ಸಂದಾಯವಾಗುವಂತೆ ಮಾಡಿದರು. ಗಂಗಾ ಕಲ್ಯಾಣ ಯೋಜನೆ 19 ಸಾವಿರ ಫಲಾನುಭವಿಗಳಿಗೆ ತಲುಪಿಸುತ್ತಿದ್ದೇವೆ. ಕೇವಲ ಐದು ತಿಂಗಳಲ್ಲೇ ನಾವೂ ಈ ಯೋಜನೆ ಅನುಷ್ಠಾನಗೊಳಿಸುತ್ತಿದ್ದೇವೆ. ಸರಳವಾಗಿ ಆಡಳಿತ ನಡೆಸಿದಾಗ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತದೆ. ನೀವು ನಮ್ಮ ಫಲಾನುಭವಗಳಲ್ಲ ನೀವು ನಮ್ಮ ಸರ್ಕಾರದ ಪಾಲುದಾರರು. ನಿಮ್ಮ ಮೇಲೆ ಹೂಡಿಕೆ ಮಾಡಿದರೇ ರಾಜ್ಯಕ್ಕೆ ಆದಾಯ ಹೆಚ್ಚಾಗುತ್ತದೆ. ನಿಮ್ಮ ಮೇಲೆ ಹಣ ತೊಡಗಿಸಿದರೆ ಅಕ್ಷಯ ಪಾತ್ರೆಯಲ್ಲಿ ಹಣ ತೊಡಗಿಸಿದಂತೆ. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಮೇಲೆ ಹಣ ತೊಡಗಿಸಿದರೆ ಅದು ಎರಡು ಪಟ್ಟು ಹೆಚ್ಚಾಗಿ ವಾಪಸ್ ಬರುತ್ತದೆ ಎಂದು ಹೇಳಿದರು.